ಗುಂಡ್ಲುಪೇಟೆ: ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಗೆ ಗುಂಡ್ಲುಪೇಟೆ ತಾಲ್ಲೂಕಿನ ಅಣ್ಣೂರು ಗ್ರಾಮದಲ್ಲಿ ಮನೆಯ ಮೇಲ್ಛಾವಣಿ ಹಾಗೂ ಮನೆಗೋಡೆಗಳು ಸಂಪೂರ್ಣ ನೆಲಸಮಗೊಂಡಿದ್ದು, ಸದ್ಯ ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅಣ್ಣೂರು ಗ್ರಾಮದ ಮಾದೇವಯ್ಯ ಎಂಬುವವರ ಮನೆಯು ನಿರಂತರವಾಗಿ ಸುರಿದ ಮಳೆಯ ರಭಸಕ್ಕೆ ಮನೆಯ ಗೋಡೆಗಳು ಕುಸಿದು ಸಂಪೂರ್ಣ ನಾಶವಾಗಿದೆ.
ಕಳೆದ ತಡರಾತ್ರಿ ಮನೆಯ ಗೋಡೆಯು ಕುಸಿದಿದ್ದು, ಮೇಲ್ಛಾವಣಿ ನೆಲಕ್ಕೆ ಉರುಳಿದೆ. ಸದ್ಯ ಮನೆಯೊಳಗೆ ಮಲಗಿದ್ದ ಐದಾರು ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ಘಟನೆಯಲ್ಲಿ ಮನೆಯಲ್ಲಿದ್ದ ಹಸು ಕರುಗಳು ಸಣ್ಣಪುಟ್ಟ ಗಾಯಗಳಾಗಿದ್ದು, ಅವು ಕೂಡ ಪ್ರಾಣಾಪಾಯದಿಂದ ಪಾರಾಗಿವೆ. ಮನೆಯನ್ನು ಕಳೆದುಕೊಂಡು ಕಂಗಾಲಾಗಿರುವ ಕುಟುಂಬ ಸೂಕ್ತ ಪರಿಹಾರ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸಿದೆ.




