ಗುಂಡ್ಲುಪೇಟೆ: ತಾಲ್ಲೂಕಿನ ಪ್ರಸಿದ್ಧ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಮಂಗಳವಾರ ಬ್ರಹ್ಮ ರಥೋತ್ಸವ ಅದ್ಧೂರಿಯಾಗಿ ನೆರವೇರಿತು.
ಗೋಪಾಲಸ್ವಾಮಿ ಉತ್ಸವ ಮೂರ್ತಿಗೆ ತಹಸಿಲ್ದಾರ್ ರಮೇಶ್ ಬಾಬು ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು.
ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಹಂಬಿನಿಂದ ರಥವನ್ನು ಎಳೆದರು. ನಂತರ ಶ್ರೀಕೃಷ್ಣನ ದರ್ಶನ ಪಡೆದರು.
ಮುಂಜಾನೆಯಿಂದಲೇ ಗೋಪಾಲನಿಗೆ ಅಭಿಷೇಕ, ವಿಶೇಷ ಪೂಜೆ ಕೈಂಕರ್ಯಗಳು ನಡೆದವು. ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರನ್ನು ಕರೆದೊಯ್ಯಲು ಕೆಎಸ್‌ಆರ್‌ಟಿಸಿಯಿಂದ ಹೆಚ್ಚಿನ ಬಸ್ ವ್ಯವಸ್ಥೆ ಮಾಡಲಾಗಿತ್ತು. ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.
ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಭೇಟಿ ನೀಡಿ ಹಿಮವದ್ ಗೋಪಾಲಸ್ವಾಮಿ ದರ್ಶನ ಪಡೆದರು. ಪ್ರಧಾನ ಅರ್ಚಕ ಗೋಪಿ ಭಟ್ಟರು ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು. ವಿವಿಧೆಡೆಯಿಂದ ಆಗಮಿಸಿದ್ದ ಸಾವಿರಾರು ಮಂದಿ ರಥೋತ್ಸವದಲ್ಲಿ ಭಾಗಿಯಾಗಿದ್ದರು.
ಬೆಟ್ಟದ ತಪ್ಪಲಿನಲ್ಲಿ 20 ಕೆಎಸ್‌ಆರ್‌ಟಿಸಿ ಬಸ್ ವ್ಯವಸ್ಥೆ ಮಾಡಲಾಗಿತ್ತು. ಬೆಳಿಗ್ಗೆಯಿಂದ ಸಂಜೆಯವರೆಗೆ ಸಾವಿರಾರು ಭಕ್ತರು ಬಸ್ಸಿನಲ್ಲಿ ಬೆಟ್ಟಕ್ಕೆ ಪ್ರಯಾಣಿಸಿ ದೇವರ ದರ್ಶನ ಪಡೆದರು.





