ಹನೂರು: ಶುಕ್ರವಾರ ತಡರಾತ್ರಿ ಸಿಡಿಲು ಬಡಿದು ಮನೆಯ ಮೇಲ್ಛಾವಣಿ ಸಂಪೂರ್ಣ ಹಾನಿಯಾಗಿರುವ ಘಟನೆ ತಾಲ್ಲೂಕಿನ ಶಾಗ್ಯ ಗ್ರಾಮದಲ್ಲಿ ಸಂಭವಿಸಿದೆ.
ಗ್ರಾಮದ ಶಿವಲಿಂಗೇಗೌಡ ಎಂಬುವವರ ಮನೆಗೆ ಸಿಡಿಲು ಬಡಿದ ಪರಿಣಾಮ ಬೆಂಕಿಯ ಜ್ವಾಲೆಗೆ ಮನೆಯ ಮೇಲ್ಛಾವಣಿ ಹೊತ್ತಿ ಉರಿದಿದೆ. ಪರಿಣಾಮ ಮನೆಯಲ್ಲಿದ್ದ ವಿದ್ಯುತ್ ಪರಿಕರಗಳು, ಶೇಖರಣೆ ಮಾಡಿದ್ದ ಆಹಾರ ಪದಾರ್ಥಗಳು ಸಂಪೂರ್ಣ ಹಾನಿಯಾಗಿದೆ.
ಘಟನೆ ನಡೆದ ಸಂದರ್ಭದಲ್ಲಿ ಮನೆಯಲ್ಲಿ ಯಾರು ಇಲ್ಲದ್ದರಿಂದ ಭಾರೀ ಅನಾಹುತ ಆಗುವುದು ತಪ್ಪಿದಂತಾಗಿದೆ. ಮನೆಯ ಗೋಡೆಯ ಒಂದು ಭಾಗ ಸಂಪೂರ್ಣವಾಗಿ ಕುಸಿದು ಬಿದ್ದಿದ್ದು, ಉಳಿದ ಗೋಡೆಗಳು ದೊಡ್ಡ ಗಾತ್ರದಲ್ಲಿ ಬಿರುಕು ಬಿಟ್ಟಿವೆ. ವಿದ್ಯುತ್ ಪರಿಕರಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ಸುಮಾರು ನಾಲ್ಕು ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ಘಟನಾ ಸ್ಥಳಕ್ಕೆ ತಹಶೀಲ್ದಾರ್ ವೈ.ಕೆ.ಗುರು ಪ್ರಸಾದ್, ಕಂದಾಯ ನಿರೀಕ್ಷಕ ಶೇಷಣ್ಣ ಸೇರಿದಂತೆ ಹಲವು ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಘಟನೆ ಕುರಿತು ಮಾತನಾಡಿರುವ ತಹಶೀಲ್ದಾರ್ ವೈ.ಕೆ.ಗುರು ಪ್ರಸಾದ್ ಅವರು, ಶುಕ್ರವಾರ ಬಡಿದ ಸಿಡಿಲಿಗೆ ಶಿವಲಿಂಗೇಗೌಡ ಎಂಬುವವರಿಗೆ ಸೇರಿದ ಮನೆಯ ಒಂದು ಗೋಡೆ ಸಂಪೂರ್ಣವಾಗಿ ಕುಸಿದಿದ್ದು, ಬೆಂಕಿಗೆ ಅಪಾರ ಪ್ರಮಾಣದ ಸಾಮಗ್ರಿಗಳು ಸುಟ್ಟುಹೋಗಿದೆ. ಈಗಾಗಲೇ ಕೆಎಆರ್‌ಐಡಿಎಲ್ ಅಧಿಕಾರಿಗಳಿಗೆ ನಷ್ಟವಾಗಿರುವ ಬಗ್ಗೆ ಮಾಹಿತಿ ನೀಡುವಂತೆ ಸೂಚನೆ ನೀಡಲಾಗಿದೆ. ವರದಿ ನೀಡಿದ ನಂತರ ಪ್ರಕೃತಿ ವಿಕೋಪದಡಿ ಸರ್ಕಾರದಿಂದ ನೀಡುವ ಪರಿಹಾರವನ್ನು ಅತಿ ಶೀಘ್ರದಲ್ಲಿಯೇ ಮನೆಯ ಮಾಲೀಕರ ಖಾತೆಗೆ ಜಮಾ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ





