ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಯಳಂದೂರು ತಾಲ್ಲೂಕಿನ ಯರಿಯೂರು ಗ್ರಾಮದ ಬಹುತೇಕ ಬಡಾವಣೆಗಳ ರಸ್ತೆಗಳು ಕೆಸರು ಗದ್ದೆಯಂತಾಗಿದ್ದು, ವಾಹನ ಮತ್ತು ಜನ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ಯರಿಯೂರು ಗ್ರಾಮದ ಬಡಾವಣೆಗಳಲ್ಲಿ ಸಮರ್ಪಕವಾದ ರಸ್ತೆಗಳಿಲ್ಲದ ಹಿನ್ನೆಲೆಯಲ್ಲಿ ಮಳೆ ನೀರು ನಿಂತುಕೊಂಡು ಸಂಚಾರಕ್ಕೆ ತೀವ್ರ ಅಡ್ಡಿಯಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಡಿಯೂರು ಗ್ರಾಮದಲ್ಲೇ ಗ್ರಾಮ ಪಂಚಾಯಿತಿಯ ಕಾರ್ಯಾಲಯವಿದೆ. ಇದಲ್ಲದೇ ಕೂಗಳತೆ ದೂರದಲ್ಲೇ ತಾಲ್ಲೂಕು ಕೇಂದ್ರವಿದೆ. ಆದರೂ ಯಾವೊಬ್ಬ ಅಧಿಕಾರಿಯೂ ಈ ಬಗ್ಗೆ ಗಮನ ಹರಿಸಿಲ್ಲ. ಚುನಾವಣೆ ಬಂದರಷ್ಟೇ ನಮ್ಮ ಬಳಿ ಬರುತ್ತಾರೆ. ಆದರೆ ಬಾಕಿ ದಿನಗಳಲ್ಲಿ ನಮ್ಮ ಸಮಸ್ಯೆಗಳ ಬಗ್ಗೆ ಕ್ಯಾರೇ ಎನ್ನಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.