Mysore
20
overcast clouds
Light
Dark

ಮಳೆ ತಂದ ಅವಾಂತರ: ಬೆಳೆ ನಾಶದಿಂದ ಗುಂಡ್ಲುಪೇಟೆ ರೈತರು ಕಂಗಾಲು

ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಬೆಳೆ ನಾಶದಿಂದ ಅನ್ನದಾತರು ಕಂಗಾಲಾಗಿದ್ದಾರೆ.

ಭಾರೀ ಮಳೆಯಿಂದ ಗುಂಡ್ಲುಪೇಟೆ ತಾಲ್ಲೂಕಿನ ಈರುಳ್ಳಿ ಬೆಳೆಗಾರರು ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಕಳೆದ ಒಂದು ವಾರದಿಂದಲೂ ಮಳೆ ಎಡಬಿಡದೇ ಸುರಿಯುತ್ತಿದ್ದು, ಸಣ್ಣ ಈರುಳ್ಳಿ ಕೊಯ್ಲಿಗೆ ತೊಂದರೆಯಾಗಿದೆ.

ಸಣ್ಣ ಈರುಳ್ಳಿಯಿಂದ ಲಾಭ ಬರುತ್ತದೆ ಎಂದು ಅಂದಾಜಿಸಿ ರೈತರು ಹಲವು ಹೆಕ್ಟೇರ್‌ಗಳಲ್ಲಿ ಸಣ್ಣ ಈರುಳ್ಳಿ ಬೆಳೆದಿದ್ದರು. ಫಸಲೇನೋ ಉತ್ತಮವಾಗಿ ಬಂತು. ಆದರೆ ಕೈಗೆ ಬಂದ ತುತ್ತು ಈಗ ಬಾಯಿಗೆ ಬರದ ಹಾಗೇ ಆಗಿದೆ. ಈಗಾಗಲೇ ಕೊಯ್ಲು ಹಂತಕ್ಕೆ ಬಂದಿರುವ ಸಣ್ಣ ಈರುಳ್ಳಿಗೆ ಮಳೆಯೇ ಅಡ್ಡಿಯಾಗಿದೆ.

ಕಳೆದ ಎರಡು ತಿಂಗಳ ಹಿಂದೆ ಸಣ್ಣ ಈರುಳ್ಳಿಗೆ ಉತ್ತಮ ಬೆಲೆಯಿತ್ತು. ಆದರೆ ಈಗ ಮಳೆ ಕಾರಣದಿಂದ ಈರುಳ್ಳಿ ಕೊಳೆಯುತ್ತಿದ್ದು, ಬೆಲೆಯೂ ಕೂಡ ಕಡಿಮೆಯಾಗಿದೆ. ಇದರಿಂದ ಅನ್ನದಾತರು ತೀವ್ರ ಬೇಸರದಲ್ಲಿದ್ದು, ಮಳೆಗೆ ಹಿಡಿಶಾಪ ಹಾಕುತ್ತಿದ್ದಾರೆ.

ಇನ್ನೂ ಮಳೆ ಕೊಂಚ ಬಿಡುವು ಕೊಟ್ಟರೆ ಈರುಳ್ಳಿ ಕೊಯ್ಲು ಮಾಡಬಹುದು. ಆದ್ರೆ ಕಳೆದ ಒಂದು ವಾರದಿಂದ ಮಳೆ ಬಿಡುವು ಕೊಡದೇ ಸುರಿಯುತ್ತಿದೆ. ಹೀಗಾಗಿ ಈರುಳ್ಳಿ ಬೆಳೆದ ರೈತರು ಕೊಯ್ಲು ಮಾಡದೇ ಸಂಕಷ್ಟ ಅನುಭವಿಸುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ರೈತರು ಅಳಲು ತೋಡಿಕೊಂಡಿದ್ದು, ಈ ಬಾರಿ ನಮಗೆ ಮಳೆಯಿಂದ ಬೆಳೆ ನಾಶವಾಗಿದೆ. ನಾವು ಈರುಳ್ಳಿ ಬೆಳೆಗೆ ಖರ್ಚು ಮಾಡಿದಷ್ಟೂ ಬೆಲೆಯೂ ಸಿಗಲ್ಲ. ನಾವು ಸಾಲಸೋಲ ಮಾಡಿ ಈರುಳ್ಳಿ ಬೆಳೆದಿದ್ದೆವು. ಆದರೆ ಈ ಮಳೆಯಿಂದ ನಮಗೆ ಭಾರೀ ನಷ್ಟವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.