ಗುಂಡ್ಲುಪೇಟೆ: ಪ್ರಧಾನಿ ನರೇಂದ್ರ ಮೋದಿ ಭೇಟಿ ಬಳಿಕ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಅರಣ್ಯಕ್ಕೆ ಪ್ರವಾಸಿಗರ ದಂಡೇ ಹರಿದು ಬರುತ್ತಿದ್ದು, ಆದಾಯದಲ್ಲಿ ಭಾರೀ ಹೆಚ್ಚಳವಾಗಿದೆ.
ಸುಮಾರು 1024 ಸಾವಿರ ಚದರ ಕಿಲೋ ಮೀಟರ್ ವ್ಯಾಪ್ತಿಯಲ್ಲಿ ವಿಸ್ತರಿಸಿರುವ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯದಲ್ಲಿ 191ಕ್ಕೂ ಹೆಚ್ಚು ಹುಲಿಗಳು, 1116ಕ್ಕೂ ಹೆಚ್ಚು ಆನೆಗಳು ಸೇರಿದಂತೆ ಚಿರತೆ, ಕರಡಿ, ಜಿಂಕೆ, ಕಾಡೆಮ್ಮೆ ಸೇರಿದಂತೆ ಮೊದಲಾದ ವನ್ಯಜೀವಿಗಳ ಆವಾಸ ಸ್ಥಾನವಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಬಂಡೀಪುರ ಅಭಯಾರಣ್ಯಕ್ಕೆ ಭೇಟಿ ನೀಡಿದ್ದರಿಂದ ಪರಿಸರ ಪ್ರವಾಸೋದ್ಯಮವು ಸಾಕಷ್ಟು ಅಭಿವೃದ್ಧಿಯಾಗಿದೆ.
ಈ ಬಾರಿ ಅಂದರೆ 2024-25ನೇ ಸಾಲಿನಲ್ಲಿ 22 ಕೋಟಿ ರೂಪಾಯಿಗೂ ಹೆಚ್ಚು ಆದಾಯ ಬರುವ ನಿರೀಕ್ಷೆಯಿದೆ ಎಂದು ಡಿಸಿಎಫ್ ಪ್ರಭಾಕರನ್ ತಿಳಿಸಿದ್ದಾರೆ.
ರಾಷ್ಟ್ರೀಯ ಉದ್ಯಾನವನ ಬಂಡೀಪುರದ ಅರಣ್ಯ ಹಾಗೂ ಇಲ್ಲಿನ ವನ್ಯಜೀವಿಗಳ ವೀಕ್ಷಣೆಗೆಂದು ನಿತ್ಯ ನೂರಾರು ಪ್ರವಾಸಿಗರು ಬರತೊಡಗಿದ್ದಾರೆ. ಪ್ರವಾಸಿಗರು ಇಲ್ಲಿ ಹಸಿರ ಸಿರಿಯನ್ನು ಕಣ್ತುಂಬಿಕೊಂಡು ಹಲವು ವನ್ಯಜೀವಿಗಳನ್ನು ನೋಡಿ ಖುಷಿ ಪಡುತ್ತಾರೆ.
ಕಳೆದ 2023ರ ಏಪ್ರಿಲ್.9ರಂದು ಪ್ರಧಾನಿ ನರೇಂದ್ರ ಮೋದಿ ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಿ ಸಫಾರಿ ನಡೆಸಿದ್ದರು.
ಒಟ್ಟಾರೆಯಾಗಿ ತನ್ನ ವನ್ಯ ಸಂಪತ್ತಿನಿಂದ ಕಂಗೊಳಿಸುತ್ತಿರುವ ಬಂಡೀಪುರ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದ್ದು, ವರ್ಷದಿಂದ ವರ್ಷಕ್ಕೆ ಆದಾಯವೂ ಕೂಡ ಹೆಚ್ಚಾಗುತ್ತಿದೆ.





