ಹನೂರು: ಕೇಂದ್ರ ಪುರಸ್ಕೃತ ಅಮೃತ್.2ರ ಯೋಜನೆಯಡಿ 9 ಕೋಟಿ ವೆಚ್ಚದಲ್ಲಿ ಪಟ್ಟಣದ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದ್ದು, ಸದಸ್ಯರುಗಳು ಪಕ್ಷಾತೀತವಾಗಿ ಸಹಕಾರ ನೀಡಬೇಕು ಎಂದು ಶಾಸಕ ಎಂ.ಆರ್.ಮಂಜುನಾಥ್ ತಿಳಿಸಿದ್ದಾರೆ.
ಹನೂರು ಪಟ್ಟಣ ಪಂಚಾಯಿತಿ ಕಚೇರಿಯ ಸಭಾಂಗಣದಲ್ಲಿ ನಡೆದ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳು ಹಾಗೂ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಹನೂರು ಪಟ್ಟಣವನ್ನು ಜಿಲ್ಲೆಯಲ್ಲಿಯೇ ಮಾದರಿ ಪಟ್ಟಣವನ್ನಾಗಿ ಮಾಡಲು ನನ್ನದೇ ಆದ ಕನಸು ಇಟ್ಟುಕೊಂಡಿದ್ದೇನೆ .ಈ ಯೋಜನೆ ಯಶಸ್ವಿಯಾಗಲು ಪಟ್ಟಣ ಪಂಚಾಯಿತಿ ಸದಸ್ಯರು ಸಹಕರಿಸಬೇಕು ಎಂದು ಮನವಿ ಮಾಡಿದರು.
ಹನೂರು ಪಟ್ಟಣಕ್ಕೆ ಯಾವುದೇ ಸಂದರ್ಭದಲ್ಲಿಯೂ ದಿನದ 24 ಗಂಟೆಯೂ ಕಾವೇರಿ ಕುಡಿಯುವ ನೀರು ಪೂರೈಕೆ ಮಾಡಲು, ಹೊಸ ಕಚ್ಚಾ ನೀರಿನ ಯಂತ್ರಗಳ ಅಳವಡಿಕೆ, ಜಲ ಶುದ್ಧೀಕರಣ ಘಟಕದಲ್ಲಿ ಹೊಸ ಶುದ್ಧ ನೀರಿನ ಯಂತ್ರಗಳನ್ನು ಅಳವಡಿಕೆ ಮಾಡಲಾಗುತ್ತಿದೆ. ಜಲ ಸಂಗ್ರಹಗಾರದಿಂದ ಡಿಐ ಕೊಳವೆ ಮಾರ್ಗದ ಅಳವಡಿಕೆ ಮಾಡಲಾಗುತ್ತಿದೆ. ಸದ್ಯದಲ್ಲೇ ಆರ್.ಎಸ್. ದೊಡ್ಡಿಯಲ್ಲಿನ ಶಿಥಿಲಗೊಂಡಿರುವ ಟ್ಯಾಂಕ್ ಕೆಡವಿ ಒಂದು ಲಕ್ಷ ಲೀಟರ್ ಸಾಮರ್ಥ್ಯದ ವಿನೂತನ ಮಾದರಿಯ ಜಲಸಂಗ್ರಹಗಾರ ನಿರ್ಮಾಣ ಮಾಡಲಾಗುವುದು ಎಂದರು.
ಅಮೃತ ನಗರೋತ್ಥಾನ 4ರ ಕಾರ್ಯಕ್ರಮದಡಿ ಹನೂರು ಪಟ್ಟಣದ ನೀರು ಸರಬರಾಜು ವ್ಯವಸ್ಥೆಯಡಿ ಸಿದ್ದಯ್ಯನಪುರ ಗ್ರಾಮದ ಬಳಿ ಇರುವ ನೀರು ಶುದ್ಧೀಕರಣ ಘಟಕದ ದುರಸ್ತಿ ಹಾಗೂ ಪುನಃಶ್ಚೇತನ ಕಾಮಗಾರಿಯನ್ನು 67 ಲಕ್ಷ ವೆಚ್ಚದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.
ಕೆಂಪೇಗೌಡ ವೃತ್ತ ಅನುಮೋದನೆಗೆ ಪ್ರಾಮಾಣಿಕ ಪ್ರಯತ್ನ: ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಅಜ್ಜೀಪುರ ಹಾಗೂ ಎಲ್ಲೇಮಾಳ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ವೃತ್ತಕ್ಕೆ ಈಗಾಗಲೇ ನಾಡಪ್ರಭು ಕೆಂಪೇಗೌಡರ ವೃತ್ತ ಎಂದು ನಾಮಕರಣ ಮಾಡಲು ಅನುಮೋದನೆಗಾಗಿ ಕಳುಹಿಸಿಕೊಡಲಾಗಿದೆ. ಈ ತಿಂಗಳ ಅಂತ್ಯದೊಳಗೆ ಅನುಮೋದನೆ ಕೊಡಿಸಿ ಶಾಶ್ವತವಾಗಿ ನಾಡಪ್ರಭು ಕೆಂಪೇಗೌಡ ವೃತ್ತ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಈ ಸ್ವತ್ತು ಆಂದೋಲನ ಕಾರ್ಯಕ್ರಮ: ಪಟ್ಟಣ ವ್ಯಾಪ್ತಿಯಲ್ಲಿರುವ ನಿವಾಸಿಗಳಿಗೆ ಪಟ್ಟಣ ಪಂಚಾಯಿತಿಯಿಂದ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡಲಾಗುತ್ತಿದೆ. ಅದೇ ರೀತಿ ಈ ಸ್ವತ್ತು ನೀಡಬೇಕಿದೆ. ಆದರೆ ಹಲವಾರು ಸಮಸ್ಯೆಗಳು ಇರುವುದರಿಂದ ಸಮಸ್ಯೆಗಳನ್ನು ಬಗೆಹರಿಸಿ ಪ್ರತಿ ವಾರ್ಡ್ ಗಳಲ್ಲಿ ಈ ಸ್ವತ್ತು ಆಂದೋಲನ ಮಾಡಿ ಪ್ರತಿಯೊಬ್ಬರಿಗೂ ಈ ಸ್ವತ್ತು ನೀಡಲು ಕ್ರಮವಹಿಸಲಾಗುವುದು. ಇದಲ್ಲದೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯನ್ನು ನಿಗದಿಪಡಿಸುವುದು. ಗ್ರಾಮ ಠಾಣಾ ಗುರುತಿಸಿ, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕಂದಾಯ ಜಮೀನಿಗೆ ಯಾವ ರೀತಿ ಈ ಸ್ವತ್ತು ಕೊಡಬಹುದು ಎಂದು ಸಂಬಂಧಪಟ್ಟ ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದರು.
ಇನ್ನು ಆಶಯ ಬೆಳವಣಿಯಲ್ಲಿ ಹಲವಾರು ಸಮಸ್ಯೆಗಳಿದ್ದು, ಇದನ್ನು ಬಗೆಹರಿಸಲು ಈಗಾಗಲೇ ಕಮಿಟಿ ರಚನೆ ಮಾಡಲಾಗಿದೆ. ಕಮಿಟಿಯ ಸದಸ್ಯರುಗಳು ಅಂತಿಮವಾಗಿ ವರದಿ ನೀಡಿದ ನಂತರ ಇಲ್ಲಿನ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದರು.
ಸಿಬ್ಬಂದಿಗಳ ಸಮಸ್ಯೆಗೆ ಪರಿಹಾರ: ಪಟ್ಟಣ ಪಂಚಾಯಿತಿಯಲ್ಲಿ ಪ್ರಥಮ ದರ್ಜೆ ಸಹಾಯಕರು ಸಮುದಾಯ ಸಂಘಟನಾಧಿಕಾರಿ ಅಭಿಯಂತರರು ಸೇರಿ 15 ಸ್ಥಾನಗಳು ಖಾಲಿ ಇರುವುದರಿಂದ ಪಟ್ಟಣ ಪಂಚಾಯಿತಿ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಈ ಸಂಬಂಧ ಸರ್ಕಾರದ ಕಾರ್ಯದರ್ಶಿಗಳ ಜೊತೆ ಚರ್ಚೆ ನಡೆಸಿದ್ದು ಆದಷ್ಟು ಬೇಗ ಸಿಬ್ಬಂದಿಗಳನ್ನು ನೇಮಕ ಮಾಡಲು ಕ್ರಮವಹಿಸಲಾಗುವುದು ಎಂದರು.
ಪೌರಕಾರ್ಮಿಕರ ನೇಮಕ: ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 13 ವಾರ್ಡಗಳಿದ್ದು ಏಳು ಜನ ಕಾಯಂ ಪೌರಕಾರ್ಮಿಕರು ಮಾತ್ರ ಇರುವುದರಿಂದ ಸ್ವಚ್ಛತೆಗೆ ತೊಂದರೆಯಾಗಿದೆ. ಈ ನಿಟ್ಟಿನಲ್ಲಿ 8 ಮಂದಿ ಪೌರಕಾರ್ಮಿಕ ಸಿಬ್ಬಂದಿಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಸಭೆಯಲ್ಲಿ ನಿರ್ಣಯ ಮಾಡಲಾಗಿದೆ ಎಂದರು.
ಇನ್ನು ಪಟ್ಟಣದ ಹೆಚ್ ನಾಗಪ್ಪ ವೃತ್ತದಲ್ಲಿ ಶ್ರೀ ಬಸವೇಶ್ವರ ಪ್ರತಿಮೆ ಇಡಲು ಸಮಾಜದವರು ಮನವಿ ನೀಡಿದ್ದಾರೆ. ಈ ವಿಚಾರವನ್ನು ಸುಧೀರ್ಘವಾಗಿ ಚರ್ಚೆ ನಡೆಸಿ ಸೂಕ್ತ ನಿರ್ಣಯ ತೆಗೆದುಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಪ.ಪಂ ಅಧ್ಯಕ್ಷೆ ಮಮ್ತಾಜ್ ಬಾನು, ಉಪಾಧ್ಯಕ್ಷ ಆನಂದ್, ಸದಸ್ಯರಾದ ಹರೀಶ್, ಗಿರೀಶ್, ಸುದೇಶ್, ಸೋಮಶೇಖರ್, ಸಂಪತ್, ಮಹೇಶ್ ನಾಯಕ, ಮಹೇಶ್, ಪವಿತ್ರ, ರೂಪ, ಮಂಜುಳಾ ಮುಖ್ಯಾಧಿಕಾರಿ ಅಶೋಕ್, ಪ್ರಭಾರ ಅಭಿಯಂತರ ನಾಗೇಂದ್ರ, ಪಟ್ಟಣ ಪಂಚಾಯಿತಿ ಸಿಬ್ಬಂದಿಗಳಾದ ಭರತ್, ಮದನ್, ಪ್ರತಾಪ್, ನಾಗೇಂದ್ರ, ದೇವಿಕಾ, ಸುಷ್ಮಾ, ಶ್ರೀನಿವಾಸ್, ರಾಕೇಶ್, ಶರತ್, ಸುನಿಲ್ ಸೇರಿದಂತೆ ಇನ್ನಿತರರು ಹಾಜರಿದ್ದರು.