ಮಹಾದೇಶ್ ಎಂ ಗೌಡ, ಹನೂರು ತಾಲ್ಲೂಕು ವರದಿಗಾರರು
ಹನೂರು: ಕಾಂಗ್ರೆಸ್ ಪಕ್ಷವು ದೇಶದ ಜನರಿಗೆ ಆಹಾರ ಭದ್ರತಾ ಕಾಯ್ದೆ, ಉದ್ಯೋಗ ಖಾತ್ರಿ, ಮಾಹಿತಿ ಹಕ್ಕು, ಕಡ್ಡಾಯ ಶಿಕ್ಷಣದ ಹಕ್ಕು, ಅರಣ್ಯ ವಾಸಿಗಳ ಹಕ್ಕು ಮುಂತಾದ ಜನಪರ ಕಾಯ್ದೆಗಳನ್ನು ರೂಪಿಸಿದೆ ಎಂದು ಮಾಜಿ ಶಾಸಕ ಆರ್.ನರೇಂದ್ರ ತಿಳಿಸಿದರು.
ತಾಲ್ಲೂಕಿನ ಕೌದಳ್ಳಿ ಹಾಗೂ ಎಲ್ಲೇಮಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಮ್ಮಿಕೊಂಡಿದ್ದ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಉಳಿಸಿ ವಿಬಿ.ಜಿ ರಾಮ್ ಜಿ ಅನ್ನು ಅಳಿಸಿ ಎಂಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸ್ವಾತಂತ್ರ್ಯ ಬಂದ ನಂತರ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ನಂತರ ದೇಶದ ಬಡವರಿಗಾಗಿ ಅನೇಕ ಜನಪರ ಕಾರ್ಯಕ್ರಮಗಳನ್ನು ನೀಡಿದೆ. ಆದರೆ ಕೇಂದ್ರ ಬಿಜೆಪಿ ಸರ್ಕಾರವು ಕಾಂಗ್ರೆಸ್ ಸರ್ಕಾರ ನೀಡಿರುವ ಕಾರ್ಯಕ್ರಮಗಳ ಹೆಸರುಗಳನ್ನು ಬದಲಾವಣೆ ಮಾಡುವ ಮೂಲಕ ಈ ಬಡ ಕಾರ್ಮಿಕರ ಮೇಲೆ ಪ್ರಹಾರ ನಡೆಸಲು ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮನರೇಗಾ ಯೋಜನೆಯನ್ನು ಮರುಸ್ಥಾಪಿಸಿ, ವಿಬಿ-ಗ್ರಾಮ್ ಜಿ ಕಾಯ್ದೆಯನ್ನು ರದ್ದುಗೊಳಿಸುವವರೆಗೂ ರಾಜ್ಯದ ಪ್ರತಿ ಹಳ್ಳಿ ಹಳ್ಳಿಯಿಂದಲೂ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ಮಾಡುವ ಅವಶ್ಯಕತೆ ಇದೆ. ಇದು ನರೇಗಾವನ್ನು ಆಶ್ರಯಿಸಿರುವ ಕೂಲಿ ಕಾರ್ಮಿಕರಿಗೆ ಮಾತ್ರವಲ್ಲ, ಇಡೀ ಗ್ರಾಮದ ಸಮಗ್ರ ಅಭಿವೃದ್ಧಿಗೆ, ಆರ್ಥಿಕ ಪ್ರಗತಿಗೆ ಮತ್ತು ಗ್ರಾಮ ಪಂಚಾಯತಿಗಳ ಅಧಿಕಾರಕ್ಕೆ ಮಾರಕವಾಗಲಿದೆ. ಗ್ರಾಮೀಣ ಜನರಿಗೆ ಹಾಗೂ ರಾಜ್ಯ ಸರ್ಕಾರದ ಮೇಲೆ ಆರ್ಥಿಕ ಸಂಕಷ್ಟದ ಹೊರೆ ಹೆಚ್ಚಲಿದೆ. ಹಾಗಾಗಿ ಈ ಆಂದೋಲನಕ್ಕೆ ಪ್ರತಿಯೊಬ್ಬರು ಕೈ ಜೋಡಿಸುವ ಮೂಲಕ ಮುಂದಿನ ಎಲ್ಲಾ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲ್ಲಿಸಲು ಪ್ರತಿಯೊಬ್ಬರು ಒಗ್ಗೂಡಿಸಿ ಶ್ರಮಿಸೋಣ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದ ಪ್ರಚಾರ ಸಮಿತಿಯ ರಾಜ್ಯ ಸಂಚಾಲಕರಾದ ಎಸ್.ನಾರಾಯಣ್ ಅವರು ಮಾತನಾಡಿ ಗ್ರಾಮೀಣ ವಿಕಾಸ ಗುರಿಯೊಂದಿಗೆ ಯುಪಿಎ ಸರ್ಕಾರವು ಮನರೇಗಾ ಯೋಜನೆಯನ್ನು ಜಾರಿಗೆ ತಂದಿತ್ತು. ಗ್ರಾಮಗಳಿಗೆ ಬೇಕಾದ ಕಾಮಗಾರಿಗಳನ್ನು ಆಯಾ ಗ್ರಾಮಗಳೇ ನಿರ್ಧರಿಸುವಂತಹ ಅಧಿಕಾರವನ್ನು ಸಹ ನೀಡಿತ್ತು. ಈಗ ಎನ್‌ಡಿಎ ಸರ್ಕಾರವು ಮನರೇಗಾ ಯೋಜನೆಯ ಮೂಲ ಉದ್ದೇಶಗಳನ್ನು ತೆಗೆದುಹಾಕಿದೆ. ಗ್ರಾಮಗಳಿಗೆ ಬೇಕಾದ ಕಾಮಗಾರಿಗಳನ್ನು ದೆಹಲಿಯಲ್ಲಿ ಕುಳಿತವರು ನಿರ್ಧರಿಸುವಂತೆ ಮಾಡಿದೆ. ಗ್ರಾಮಗಳ ಅಗತ್ಯ ಹಾಗೂ ಆದ್ಯತೆಗಳಿಗೆ ಅವಕಾಶವೇ ಇಲ್ಲದಂತೆ ಮಾಡಿದೆ’ ಎಂದರು.
‘ಈ ಹಿಂದೆ ಮನರೇಗಾ ಯೋಜನೆಯಡಿ ಕೇಂದ್ರ ಸರ್ಕಾರವೇ ಶೇ 90 ರಷ್ಟು ಅನುದಾನ ನೀಡುತ್ತಿತ್ತು. ಆದರೆ, ಹೊಸ ಯೋಜನೆಯ ಅಡಿ ಶೇ 60:40 ಅನುಪಾತದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಅನುದಾನ ನೀಡಬೇಕು ಎಂಬ ನಿಯಮ ಸೇರಿಸಲಾಗಿದೆ. ಇದರಿಂದ ರಾಜ್ಯಗಳ ಮೇಲೆ ಆರ್ಥಿಕ ಹೊರೆಯಾಗಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನರೇಗಾ ಅನುಷ್ಠಾನದಲ್ಲಿ ಹನೂರು ತಾಲ್ಲೂಕು ಮೊದಲ ಸ್ಥಾನ: ನರೇಗಾ ಯೋಜನೆಯಡಿ ಜಿಲ್ಲೆಯಲ್ಲಿ ಹನೂರು ತಾಲ್ಲೂಕು ಸರ್ಮಪಕವಾಗಿ ಅನುದಾನವನ್ನು ಸದ್ಬಳಕೆ ಮಾಡಿಕೊಂಡು ಪ್ರತಿಯೊಬ್ಬರಿಗೂ ಉದ್ಯೋಗ ನೀಡುವ ಮೂಲಕ ಪ್ರಥಮ ಸ್ಥಾನದಲ್ಲಿದೆ ಎಂದರು.
ರಾಮಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ್ ಮಾತನಾಡಿ, ಯುಪಿಎ ಸರ್ಕಾರದ ಅವಧಿಯಲ್ಲಿ ಸಾಕಷ್ಟು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದು ಅದರಿಂದ ಪ್ರತಿಯೊಬ್ಬರು ಜೀವನ ಕಟ್ಟಿಕೊಂಡಿದ್ದಾರೆ. ಆದರೆ ಬಿಜೆಪಿ ಸರ್ಕಾರ ಹೊಸ ಕಾಯ್ದೆಯನ್ನು ಜಾರಿಗೆ ತರುವ ಮೂಲಕ ಬಡವರಿಗೆ ಅನ್ಯಾಯವಾಗುತ್ತಿದೆ. ಈ ಕಾಯ್ಡೆಯು ಉಳ್ಳವರಿಗೆ ಅನುಕೂಲವಾಗಲಿದೆ ಎಂದರಲ್ಲದೇ ಕೋವಿಡ್ ಸಂದರ್ಭದಲ್ಲಿ ಹನೂರು ಕ್ಷೇತ್ರದಲ್ಲಿ ಮಾಜಿ ಶಾಸಕರಾದ ಆರ್ ನರೇಂದ್ರವರು ಪ್ರತಿಯೊಂದು ಗ್ರಾಮ ಪಂಚಾಯಿತಿಗೂ ಭೇಟಿ ನರೇಗಾ ಯೋಜನೆಯಡಿ ಪ್ರತಿಯೊಂದು ಕುಟುಂಬಕ್ಕೆ ಕೆಲಸ ನೀಡುವ ಮೂಲಕ ಅಂದಿನ ದಿನಗಳಲ್ಲಿ ಅವರು ಸಂಕಷ್ಟಕ್ಕೆ ಜೊತೆಯಾಗಿದ್ದರು. ಹಾಗಾಗಿ ನರೇಗಾ ಯೋಜನೆಯಡಿ ಗ್ರಾಮ ಪಂಚಾಯತಿಗೆ ಜೀವ ತುಂಬಲು ಇದು ಅನುಕೂಲವಾಗಲಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಚಾಮುಲ್ ಅಧ್ಯಕ್ಷ ನಂಜುಂಡಸ್ವಾಮಿ, ನಿರ್ದೇಶಕ ಶಾಹುಲ್ ಅಹಮದ್, ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ರಾಚಯ್ಯ, ಹನೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಕುಂದ ವರ್ಮ, ರಾಮಾಪುರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಈಶ್ವರ್, ಜಿಲ್ಲಾ ಪ್ರಚಾರ ಸಮಿತಿಯ ಅಧ್ಯಕ್ಷ ಮಧುಸೂದನ್, ಜಿಲ್ಲಾ ಕಾಂಗ್ರೆಸ್ ವಕ್ತಾರ ಮಧುವನಹಳ್ಳಿ ಶಿವಕುಮಾರ್, ಯುವ ಮುಖಂಡ ಚೇತನ್ ಕುಮಾರ್, ಚಾಂದ್ ಪಾಷ, ಗೋವಿಂದ, ಶ್ರೀರಂಗಶೆಟ್ಟಿ, ಶಫೀ, ವರ್ಗಲ್ ಶೆಟ್ಟಿ ಹಾಗೂ ಇನ್ನಿತರರು ಇದ್ದರು.





