Mysore
23
broken clouds

Social Media

ಶನಿವಾರ, 21 ಡಿಸೆಂಬರ್ 2024
Light
Dark

ಹನೂರಿನಲ್ಲಿ ಕಳ್ಳತನ ಪ್ರಕರಣ: ಚಿನ್ನದೊರೆ ನಿವಾಸಕ್ಕೆ ಮಾಜಿ ಶಾಸಕ ಆರ್.ನರೇಂದ್ರ ಭೇಟಿ

ಹನೂರು: ಪಟ್ಟಣದ ಚಿನ್ನದೊರೆ ಎಂಬುವವರ ಮನೆಯಲ್ಲಿ ನಗದು ಹಾಗೂ ಚಿನ್ನ ಕಳ್ಳತನವಾಗಿದ್ದ ಹಿನ್ನೆಲೆಯಲ್ಲಿ ಮಾಜಿ ಶಾಸಕ ಆರ್.ನರೇಂದ್ರ ಅವರು, ಚಿನ್ನದೊರೆ ನಿವಾಸಕ್ಕೆ ಭೇಟಿ ನೀಡಿ ಘಟನೆಯ ಸಂಬಂಧ ಮಾಹಿತಿ ಪಡೆದುಕೊಂಡು ಕುಟುಂಬಸ್ಥರಿಗೆ ಧೈರ್ಯ ತುಂಬಿದರು.

ಪರಿಶೀಲನೆ ನಂತರ ಆರ್.ನರೇಂದ್ರ ಅವರು, ದೂರವಾಣಿ ಮುಖಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕವಿತಾರನ್ನು ಸಂಪರ್ಕಿಸಿ ತನಿಖೆಯ ಬಗ್ಗೆ ಮಾಹಿತಿ ಪಡೆದುಕೊಂಡರು. ಬಳಿಕ ಮಾತನಾಡಿದ ಅವರು, ಜಿಲ್ಲೆಯಲ್ಲಿಯೇ ಇದುವರೆಗೂ ಇಷ್ಟು ದೊಡ್ಡ ಮಟ್ಟದಲ್ಲಿ ಕಳ್ಳತನವಾಗಿರಲಿಲ್ಲ. ಇದೀಗ ಹನೂರು ಪಟ್ಟಣದಲ್ಲಿ ಕಳ್ಳತನ ನಡೆದಿರುವುದು ಸ್ಥಳೀಯರನ್ನು ಆತಂಕಕ್ಕೀಡು ಮಾಡಿದೆ. ಈಗಾಗಲೇ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಕಳ್ಳತನ ಪ್ರಕರಣವನ್ನು ಆದಷ್ಟು ಬೇಗ ಭೇದಿಸಿ ನಗದು ಹಾಗೂ ಚಿನ್ನವನ್ನು ಪತ್ತೆ ಹಚ್ಚುವಂತೆ ತಿಳಿಸಿದ್ದೇನೆ. ಈ ಕಳ್ಳತನ ಪ್ರಕರಣವನ್ನು ಪತ್ತೆಹಚ್ಚಲು ಈಗಾಗಲೇ ವಿಶೇಷ ತಂಡ ರಚನೆಯಾಗಿರುವುದು ತಿಳಿದು ಬಂದಿದೆ. ನಮ್ಮ ರಾಜ್ಯದ ಪೊಲೀಸರು ಇದಕ್ಕಿಂತಲೂ ವಿಭಿನ್ನವಾಗಿರುವ ಪ್ರಕರಣಗಳನ್ನು ಭೇದಿಸಿ ಇಡೀ ದೇಶದಲ್ಲಿಯೇ ಮನೆ ಮಾತಾಗಿದ್ದಾರೆ. ಈ ಪ್ರಕರಣವು ಸುಖಾಂತ್ಯ ಕಂಡು ನೊಂದವರಿಗೆ ನ್ಯಾಯ ಕೊಡಿಸುವ ಮೂಲಕ ರಾಜ್ಯದ ಪೊಲೀಸರು ಇತರೆ ರಾಜ್ಯದವರಿಗೆ ಮಾದರಿಯಾಗಲಿ ಎಂದರು.

ಘಟನೆಯ ಸಂಬಂಧ ಚಿನ್ನದೊರೆ ಮಾತನಾಡಿ, ನನ್ನ ಮೂರನೇ ಮಗಳು ದರ್ಶಿನಿ ರಾಜಸ್ಥಾನದ ಜೈಪುರ್‌ನಲ್ಲಿ ಸಾಫ್ಟ್‌ವೇರ್‌ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಬರುವ ಸಂಬಳವನ್ನು ನಮಗೆ ಕಳುಹಿಸುತ್ತಿದ್ದರು. ನಾವು ನಮ್ಮ ಊರಿನಲ್ಲಿದ್ದ ಜಮೀನು ಮಾರಾಟ ಮಾಡಿ ಮನೆಯಲ್ಲಿ 20 ಲಕ್ಷ ನಗದು ಹಾಗೂ ಮದುವೆಗೆ ಚಿನ್ನ ಖರೀದಿ ಮಾಡಿ ಮನೆಯಲ್ಲಿ ಇಟ್ಟಿದ್ದೆವು. ನಮ್ಮ ಸಂಬಂಧಿಕರ ಕಾರ್ಯಕ್ರಮ ಇದ್ದ ಹಿನ್ನೆಲೆ ತಮಿಳುನಾಡಿಗೆ ತೆರಳಿ ವಾಪಸ್ ಮಧ್ಯರಾತ್ರಿ ಮನೆಗೆ ಬಂದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂತು ಎಂದು ಘಟನೆ ಬಗ್ಗೆ ವಿವರಿಸಿದರು.

ಭೇಟಿಯ ವೇಳೆ ಪಟ್ಟಣ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಮಾದೇಶ್, ಮುಖಂಡರಾದ ರಮೇಶ್ ನಾಯ್ಡು, ಮಾದೇಶ್, ರಾಜೇಶ್, ಪ್ರದೀಪ್ ನಾಯ್ಡು, ನಾಗೇಶ್, ವೆಂಕಟೇಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.

Tags: