Mysore
18
scattered clouds

Social Media

ಶುಕ್ರವಾರ, 09 ಜನವರಿ 2026
Light
Dark

ಹನೂರು| ಪಚ್ಚೆದೊಡ್ಡಿ ಗ್ರಾಮಕ್ಕೆ ಸಾರ್ವಜನಿಕ ಅರ್ಜಿ ಸಮಿತಿ ಸದಸ್ಯ ಸುರೇಶ್‌ ಕುಮಾರ್‌ ಭೇಟಿ

ಮಹಾದೇಶ್‌ ಎಂ ಗೌಡ 

ಹನೂರು: ತಾಲ್ಲೂಕಿನ ಪಚ್ಚೆ ದೊಡ್ಡಿ ಗ್ರಾಮಕ್ಕೆ ಸಾರ್ವಜನಿಕ ಅರ್ಜಿ ಸಮಿತಿ ಸದಸ್ಯ ಹಾಗೂ ರಾಜಾಜಿನಗರ ಕ್ಷೇತ್ರದ ಶಾಸಕ ಸುರೇಶ್ ಕುಮಾರ್ ಭೇಟಿ ನೀಡಿ ಗ್ರಾಮಸ್ಥರಿಂದ ಅಹವಾಲು ಸ್ವೀಕರಿಸಿದರು.

ಗ್ರಾಮದ ಹಿರಿಯ ಮುಖಂಡ ಮುನಿರಾಜು ಮಾತನಾಡಿ, ನಮ್ಮ ಗ್ರಾಮಕ್ಕೆ ಸಮರ್ಪಕ ರಸ್ತೆ ವ್ಯವಸ್ಥೆ ಇಲ್ಲದೆ ಇರುವುದರಿಂದ ಶಾಲಾ ವಿದ್ಯಾರ್ಥಿಗಳಿಗೆ ಗ್ರಾಮಸ್ಥರಿಗೆ ಸಂಚರಿಸಲು ತುಂಬಾ ತೊಂದರೆಯಾಗುತ್ತಿದೆ. ಸಾರಿಗೆ ವ್ಯವಸ್ಥೆ ಇಲ್ಲದೆ ಇರುವುದರಿಂದ ರೈತರು ತಾವು ಬೆಳೆದ ಬೆಳೆಗಳನ್ನು ಅತಿ ಕಡಿಮೆ ಬೆಲೆಗಳಿಗೆ ದಲ್ಲಾಳಿಗಳಿಗೆ ನೀಡುವಂತಹ ಪರಿಸ್ಥಿತಿ ಇದೆ, ಮೊಬೈಲ್ ನೆಟ್ವರ್ಕ್ ಇಲ್ಲದೆ ಇರುವುದರಿಂದ ತುರ್ತು ಸಂದರ್ಭಗಳಲ್ಲಿ ವಾಹನದ ವ್ಯವಸ್ಥೆ ಸಿಗುತ್ತಿಲ್ಲ ಇದರಿಂದ ಗರ್ಭಿಣಿಯರು ಅನಾರೋಗ್ಯ ಪೀಡಿತರಿಗೆ ತೊಂದರೆಯಾಗುತ್ತಿದೆ. ಇದಲ್ಲದೆ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್‌ ಬರುತ್ತಿಲ್ಲ, ಈ ನಿಟ್ಟಿನಲ್ಲಿ ತಾವು ಈ ಹಿಂದೆ ಭರವಸೆ ನೀಡಿದಂತೆ ಎರಡು ಸಮಸ್ಯೆಗಳನ್ನು ಬಗೆಹರಿಸುತ್ತೀರಾ ಅದೇ ರೀತಿ ನಮ್ಮ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದರು.

ಗ್ರಾಮದ ಲಕ್ಷ್ಮಮ್ಮ ಎಂಬುವವರು ಮಾತನಾಡಿ, ನಮ್ಮ ಗ್ರಾಮಕ್ಕೆ ಯಾವುದೇ ಬಸ್ಗಳು ಬಾರದೇ ಇರುವುದರಿಂದ ಆಸ್ಪತ್ರೆಗೆ ಹೋಗಲು ಸಾಧ್ಯವಾಗುತ್ತಿಲ್ಲ. ರಸ್ತೆ ಸರಿ ಇಲ್ಲದೆ ಇರುವುದರಿಂದ ನಮ್ಮ ಮಕ್ಕಳು ಸಹ ನಮ್ಮನ್ನು ಕರೆದುಕೊಂಡು ಹೋಗಲು ಹಿಂಜರಿಯುತ್ತಿದ್ದಾರೆ. ಇದರಿಂದ ಕಾಲು ನೋವಿನಲ್ಲಿಯೇ ಬಳಲುತ್ತಿದ್ದೇವೆ. ಪೋಸ್ಟ್ ಮ್ಯಾನ್ ಗಳು ಸಹ ಪಿಂಚಣಿ ಹಣವನ್ನು ನಮ್ಮ ಗ್ರಾಮಕ್ಕೆ ಬಂದು ನೀಡುತ್ತಿಲ್ಲ. ಬದಲಾಗಿ ನಾವೇ ಬಸಪ್ಪನ ದೊಡ್ಡಿ ಗ್ರಾಮಕ್ಕೆ ಹೋಗಿ ಪಡೆಯಬೇಕಾದ ಪರಿಸ್ಥಿತಿ ಇದೆ. ಈ ನಿಟ್ಟಿನಲ್ಲಿ ನಮ್ಮ ಗ್ರಾಮಕ್ಕೆ ಹಣ ತಂದು ಕೊಡುವ ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್ ಮಾತನಾಡಿ, ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು 15ಕು ಹೆಚ್ಚು ಶಾಲೆಗಳು ವ್ಯಾಪ್ತಿಯಲ್ಲಿ ಇರುವುದರಿಂದ ಸಮರ್ಪಕ ಬಸ್ ವ್ಯವಸ್ಥೆ ಇಲ್ಲದೆ ಇರುವುದರಿಂದ ಅನಾನುಕೂಲವಾಗುತ್ತಿದೆ ಈ ನಿಟ್ಟಿನಲ್ಲಿ ಸಮಸ್ಯೆ ಬಗೆಹರಿಸುವಂತೆ ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ವರದಿ ನೀಡಲಾಗಿದೆ ಎಂದು ತಿಳಿಸಿದರು.

ಗ್ರಾಮಸ್ಥರ ಸಮಸ್ಯೆ ಆಲಿಸಿದ ನಂತರ ಶಾಸಕ ಸುರೇಶ್ ಕುಮಾರ್ ಮಾತನಾಡಿ, ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗ ವಿದ್ಯಾರ್ಥಿಗಳಿಗೆ ವಾಹನದ ವ್ಯವಸ್ಥೆ ಇಲ್ಲದೆ ಇರುವುದು ಹಾಗೂ ಸಂಚಾರಿ ನ್ಯಾಯಬೆಲೆ ಅಂಗಡಿ ಮೂಲಕ ಪಡಿತರ ವಿತರಿಸುವಂತೆ ಮನವಿ ಮಾಡಿದ್ದರು. ಅದರಂತೆ ಎರಡು ಸಮಸ್ಯೆಗಳನ್ನು ಬಗೆಹರಿಸಿದ್ದೇನೆ. ಇದೀಗ ಗ್ರಾಮದಲ್ಲಿ ವಿದ್ಯಾರ್ಥಿಗಳಿಗೆ ವಾಹನದ ವ್ಯವಸ್ಥೆ ಇಲ್ಲದಿರುವುದು ಗಮನಕ್ಕೆ ಬಂದ ತಕ್ಷಣ ಬೆಳಗಾವಿ ಅಧಿವೇಶನ ಮುಗಿದ ನಂತರ ಗ್ರಾಮಕ್ಕೆ ಖುದ್ದು ಭೇಟಿ ನೀಡಿ ಸಮಸ್ಯೆ ಆಲಿಸಲು ತೀರ್ಮಾನಿಸಿದ್ದೆ. ಅದರಂತೆ ಗ್ರಾಮಕ್ಕೆ ಬಂದು ಗ್ರಾಮಸ್ಥರ ಕುಂದು ಕೊರತೆಗಳನ್ನು ಆಲಿಸಿದ್ದೇನೆ ಎಂದರು.

ಗ್ರಾಮದಲ್ಲಿರುವ ಪ್ರತಿ ಸಮಸ್ಯೆಯನ್ನು ಪ್ರತ್ಯೇಕವಾಗಿ ಮನವಿ ಪತ್ರದ ಮೂಲಕ ನೀಡುವಂತೆ ಗ್ರಾಮಸ್ಥರಿಗೆ ತಿಳಿಸಿದ್ದೇನೆ. ಪ್ರತಿ ತಿಂಗಳು ನಡೆಯುವ ಸಾರ್ವಜನಿಕ ಅರ್ಜಿ ಸಮಿತಿಯ ಸಭೆಯ ಮುಂದಿಟ್ಟು ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಈ ಸಮಿತಿಯಲ್ಲಿ ಎಲ್ಲಾ ಪಕ್ಷದ ಸದಸ್ಯರು ಇರುವುದರಿಂದ ಸಮಸ್ಯೆ ಬಗೆಹರಿಸಲು ಎಲ್ಲರೂ ಸಹಕಾರ ನೀಡುತ್ತಿದ್ದಾರೆ. ಇದೇ ರೀತಿ ಸುಳ್ಯ ಗ್ರಾಮದಲ್ಲಿ ಕಳೆದ ಹಲವಾರು ವರ್ಷಗಳಿಂದ ಇದ್ದ ಸೇತುವೆ ಸಮಸ್ಯೆಯನ್ನು ಎಪ್ಪತ್ತು ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಿ ಸೇತುವೆ ನಿರ್ಮಾಣ ಮಾಡಲಾಗಿದೆ ಎಂದರು.

ಇನ್ನು ಗ್ರಾಮಸ್ಥರಿಗೆ ರಸ್ತೆ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಸಚಿವರ ಜೊತೆ ಚರ್ಚೆ ನಡೆಸಿ ರಸ್ತೆ ಅಭಿವೃದ್ಧಿ ಪಡಿಸಲು ಕ್ರಮ ವಹಿಸಲಾಗುವುದು. ಉಳಿದಂತೆ ಆರೋಗ್ಯ ಇಲಾಖೆಯ ಮುಖ್ಯ ಆಯುಕ್ತರ ಜೊತೆ ಮಾತನಾಡಿ ಪ್ರತಿಯೊಂದು ವಾರಕ್ಕೊಮ್ಮೆ ಮೊಬೈಲ್ ಅಂಬುಲೆನ್ಸ್ ಮೂಲಕ ಚಿಕಿತ್ಸೆ ಕೊಡಿಸಲಾಗುವುದು. ಒಟ್ಟಾರೆ ಗ್ರಾಮದಲ್ಲಿರುವ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಸಾರ್ವಜನಿಕ ಅರ್ಜಿ ಸಮಿತಿಯ ಕಮಿಟಿಯ ಎಲ್ಲಾ ಸದಸ್ಯರನ್ನು ಗ್ರಾಮಕ್ಕೆ ಕರೆತಂದು ಬಗೆಹರಿಸುವ ನಿಟ್ಟಿನಲ್ಲಿ ಚರ್ಚೆ ನಡೆಸಲಾಗುವುದು ಎಂದರು.

ತಾತ್ಕಾಲಿಕವಾಗಿ ಬಸ್ ವ್ಯವಸ್ಥೆ: ಗ್ರಾಮಸ್ಥರಿಗೆ ಸಾರಿಗೆ ವ್ಯವಸ್ಥೆ ಇಲ್ಲದೆ ಇರುವುದರಿಂದ ಅನಾನುಕೂಲವಾಗುತ್ತಿರುವುದು ಗಮನಕ್ಕೆ ಬಂದಿದೆ ಈ ಕೂಡಲೇ ಸಾರಿಗೆ ಸಚಿವರ ಜೊತೆ ಚರ್ಚೆ ನಡೆಸಿ ಬೆಳಗ್ಗೆ ಹಾಗೂ ಸಾಯಂಕಾಲದ ವೇಳೆ ಒಂದು ಬಸ್ ವ್ಯವಸ್ಥೆಯನ್ನು ಮಾಡಲು ಚರ್ಚೆ ನಡೆಸುತ್ತೇನೆ ವಿದ್ಯಾರ್ಥಿಗಳಿಗೆ ಅರಣ್ಯ ಇಲಾಖೆಯ ಸಫಾರಿ ವಾಹನದ ವ್ಯವಸ್ಥೆ ಮಾಡಿದ್ದಾರೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿರುವುದರಿಂದ ಮತ್ತೊಂದು ವಾಹನದ ವ್ಯವಸ್ಥೆಗೆ ಸಂಬಂಧಪಟ್ಟ ಸಚಿವರ ಜೊತೆ ಚರ್ಚೆ ನಡೆಸುತ್ತೇನೆ ಎಂದು ಭರವಸೆ ನೀಡಿದರು.

ನಾಡಗೀತೆ ಹಾಡಿದ ವಿದ್ಯಾರ್ಥಿಗಳು : ಗ್ರಾಮಸ್ಥರ ಕುಂದು ಕೊರತೆಯನ್ನು ಆಲಿಸಿದ ನಂತರ ಶಾಸಕ ಸುರೇಶ್ ಕುಮಾರ್ ಶಾಲೆಗೆ ಭೇಟಿ ನೀಡಿ ಮೊದಲಿಗೆ ವಿದ್ಯಾರ್ಥಿಗಳಿಂದ ನಾಡಗೀತೆ ಹಾಡುವಂತೆ ತಿಳಿಸಿದರು. ವಿದ್ಯಾರ್ಥಿಗಳ ಜೊತೆ ಎದ್ದು ನಿಂತು ಅವರ ಜೊತೆ ನಾಡಗೀತೆಯನ್ನು ಹಾಡಿದರು. ನಂತರ ವಿದ್ಯಾರ್ಥಿಗಳ ಕಲಿಕೆಯ ಗುಣಮಟ್ಟವನ್ನು ತಿಳಿದುಕೊಳ್ಳುವ ನಿಟ್ಟಿನಲ್ಲಿ ರಂಜಿತ್ ಎಂಬ ವಿದ್ಯಾರ್ಥಿಯಿಂದ ಪಾಠವನ್ನು ಓದಿಸಿದರು. ವಿದ್ಯಾರ್ಥಿಯು ಪುಸ್ತಕವನ್ನು ಕಣ್ಣಿನ ಹತ್ತಿರ ಇಟ್ಟುಕೊಂಡು ಓದುತ್ತಿರುವುದನ್ನು ಗಮನಿಸಿದ ಸುರೇಶ್ ಕುಮಾರ್ ರವರು ಎಲ್ಲ ವಿದ್ಯಾರ್ಥಿಗಳಿಗೆ ಕಣ್ಣಿನ ತಪಾಸಣೆ ಮಾಡಿಸುವಂತೆ ಸಲಹೆ ನೀಡಿದರು.

ರಾಮಾಪುರ ಪೊಲೀಸ್ ಠಾಣೆ ಸ್ಮಾರಕ ಮಾಡಲು ಸೂಕ್ತ ಕ್ರಮ : ಬ್ರಿಟಿಷರ ಕಾಲದಲ್ಲಿ ನಿರ್ಮಾಣ ಮಾಡಿರುವ ಹಾಗೂ ವೀರಪ್ಪನ್ ದಾಳಿ ಮಾಡಿದ ರಾಮಪುರ ಪೊಲೀಸ್ ಠಾಣೆಯನ್ನು ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗ ಸ್ಮಾರಕ ಮಾಡಲು ಚಿಂತಿಸಿದ್ದೆ, ಕಾರಣಾಂತರದಿಂದ ಅದು ಪೂರ್ಣಗೊಂಡಿಲ್ಲ ಈ ಕೂಡಲೇ ಪೊಲೀಸ್ ಮಹಾನಿರ್ದೇಶಕರಾದ ಸಲೀಂ ರವರ ಜೊತೆ ಚರ್ಚೆ ನಡೆಸಿ ರಾಮಾಪುರ ಪೊಲೀಸ್ ಠಾಣೆಯನ್ನು ಸ್ಮಾರಕ ಮಾಡಲು ಮೊದಲ ಆದ್ಯತೆ ನೀಡಲಾಗುವುದು ಎಂದರು.

ಇದೇ ವೇಳೇ ಬಿಆರ್‌ಸಿ ವೆಂಕಟೇಶ್, ಡಿಆರ್‌ಎಫ್‌ಓ ನಂದೀಶ್, ಗ್ರಾಮಸ್ಥರಾದ ಪಚ್ಚಮ್ಮ ಶಿವಕುಮಾರ್, ನಾರಾಯಣಗೌಡ ಗೋವಿಂದೇಗೌಡ, ಕೃಷ್ಣೇಗೌಡ, ಮನ್ನಾದೇಗೌಡ ಸೇರಿದಂತೆ ಇನ್ನಿತರರು ಹಾಜರಿದ್ದರು.

 

 

Tags:
error: Content is protected !!