ತೆಳ್ಳನೂರು -ಬಂಡಳ್ಳಿ ಮಾರ್ಗ ಮಧ್ಯದಲ್ಲಿ ದುರ್ಘಟನೆ
ಹನೂರು: ಮದುವೆ ನಿಶ್ಚಿತಾರ್ಥಕ್ಕೆ ತೆರಳಿದ್ದ ಬಸ್‌ವೊಂದು ಅಪಘಾತಕ್ಕಿಡಾಗಿ ಓರ್ವ ಮೃತಪಟ್ಟು, 35ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿರುವ ಘಟನೆ ಜರುಗಿದೆ.
ದೊಡ್ಡಿಂದುವಾಡಿ ಗ್ರಾಮದ ನವೀನ್ (೩೨) ಮೃತಪಟ್ಟವರು. ಮದುವೆ ನಿಶ್ಚಿತಾರ್ಥ ಮುಗಿಸಿ ವಾಪಸ್ ಗ್ರಾಮಕ್ಕೆ ಬರುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಬಸ್ಸಿನಲ್ಲಿ 70ಕ್ಕೂ ಹೆಚ್ಚು ಮಂದಿ ಇದ್ದರು.
ಘಟನೆಯ ವಿವರ: ಹನೂರು ತಾಲ್ಲೂಕಿನ ಶಾಗ್ಯ ಗ್ರಾಮದ ಯುವಕನಿಗೂ ಕನಕಪುರ ಸಮೀಪದ ಹನಿಯೂರು ಗ್ರಾಮದ ಯುವತಿಗೂ ನಿಶ್ಚಿತಾರ್ಥ ನಿಶ್ಚಯವಾಗಿತ್ತು.
ಅದರಂತೆ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಶಾಗ್ಯ ಗ್ರಾಮದ ಯುವಕನ ಸಂಬಂಧಿಕರು, ಸ್ನೇಹಿತರು ಖಾಸಗಿ ಬಸ್‌ನಲ್ಲಿ ತೆರಳಿ ನಿಶ್ಚಿತಾರ್ಥ ಮುಗಿಸಿಕೊಂಡು ವಾಪಸ್ ಗ್ರಾಮಕ್ಕೆ ಆಗಮಿಸುವಾಗ ತೆಳ್ಳನೂರು -ಬಂಡಳ್ಳಿ ಮಾರ್ಗ ಮಧ್ಯದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿದೆ.
ಈ ವೇಳೆ ಬಸ್ ಡೋರ್‌ನಲ್ಲಿ ನಿಂತಿದ್ದ ಕ್ಲೀನರ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಸುನಿಲ್ ಎಂಬವರು ಬಸ್ ಕೆಳಗೆ ಸಿಲುಕಿಕೊಂಡು ಎರಡು ಕಾಲುಗಳು ತುಂಡಾಗಿ ನರಳಾಡುತ್ತಿದ್ದರು. ಇದನ್ನು ನೋಡಿದ ದಾರಿಹೋಕರು ಬಂಡಳ್ಳಿ ಗ್ರಾಮಸ್ಥರು ಹಾಗೂ ಸಂಬಂಧಿಕರಿಗೆ ವಿಚಾರ ತಿಳಿಸಿದ್ದಾರೆ.
ತಕ್ಷಣ ಬಂಡಳ್ಳಿ ಗ್ರಾಮದ ನಿವಾಸಿಗಳು ಹಾಗೂ ಸಂಬಂಧಿಕರು ಸ್ಥಳಕ್ಕಾಗಮಿಸಿ ಬಸ್ ಅನ್ನು ಜೆಸಿಬಿ ಮೂಲಕ ಮೇಲೆ ಎತ್ತಿಸಿ, ಗಾಯಗೊಂಡಿದ್ದ ಸುನಿಲ್ ರವರನ್ನು ಆಂಬ್ಯುಲೆನ್ಸ್ ಮೂಲಕ ಕೊಳ್ಳೇಗಾಲ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ. ಉಳಿದಂತೆ ಬಂಡಳ್ಳಿ ಗ್ರಾಮದ ಖಾಸಗಿ ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಕೊಳ್ಳೇಗಾಲ ಉಪ ವಿಭಾಗ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ.
ಈ ಘಟನೆಯಲ್ಲಿ ಸುಮಾರು 35 ಮಂದಿಗೂ ಹೆಚ್ಚು ಜನರು ಗಾಯಗಳಾಗಿದೆ. ಈ ಪೈಕಿ ಬಸವರಾಜು ಎಂಬವರಿಗೆ ಕೈ ಮುರಿದಿದೆ. ಉಳಿದಂತೆ ರಾಚಪ್ಪ, ನೂತನ್, ರಾಚಯ್ಯ, ಚೆನ್ನಮ್ಮ, ವಸಂತ, ಶಂಕರ್, ಸಿಂಧು, ಸಿದ್ದಮ್ಮ, ಮಾದೇವ ತಂಬಡಿ, ಮನು, ರಾಚಯ್ಯ, ರಾಜಮ್ಮ ಮಹದೇವಮ್ಮ, ಸಿದ್ದಯ್ಯ, ಹರೀಶ್, ಅರುಣ್, ನಿಖಿಲ್, ಪ್ರೇಮ್ ಎಂಬವರಿಗೆ ಕೈ, ತೋಳು, ತಲೆಗೆ ಪೆಟ್ಟಾಗಿದೆ.
ವಿಚಾರ ತಿಳಿಯುತ್ತಿದ್ದಂತೆ ಕೊಳ್ಳೇಗಾಲ ಉಪ ವಿಭಾಗದ ಡಿವೈಎಸ್ಪಿ ಧರ್ಮೇಂದ್ರ, ಹನೂರು ಪೊಲೀಸ್ ಠಾಣೆಯ ಎಸ್‌ಐ ಮಂಜುನಾಥ್ ಪ್ರಸಾದ್ ಹಾಗೂ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯ ಎಸ್‌ಐ, ಘಟನಾ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಗಾಯಾಳುಗಳಿಗೆ ಅಗತ್ಯ ಸೌಕರ್ಯಗಳನ್ನು ಕಲ್ಪಿಸಿದ್ದಾರೆ.
ಸೂಚನಾ ಫಲಕ ಅಳವಡಿಸಿ
ತೆಳ್ಳನೂರು ಗ್ರಾಮದಿಂದ ಬಂಡಳ್ಳಿ ಗ್ರಾಮದವರೆಗೆ ರಸ್ತೆ ತೀವ್ರ ತಿರುವುಗಳಿಂದ ಕೂಡಿದ್ದು, ಇಲ್ಲಿ ಹತ್ತಕ್ಕೂ ಹೆಚ್ಚು ಅಪಘಾತಗಳು ನಡೆದಿವೆ. ಈ ಜಾಗದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಸೂಚನಾ ಫಲಕ ಅಳವಡಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.





