ಹನೂರು: ಅಕ್ರಮವಾಗಿ ಗಾಂಜಾ ಶೇಖರಣೆ ಮಾಡಿ ಸಾಗಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯೊರ್ವನನ್ನು ಹನೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹನೂರು ತಾಲೂಕಿನ ದಂಟಳ್ಳಿ ಗ್ರಾಮದ ನಿವಾಸಿ ನಾಗರಾಜು (29) ಆಲಿಯಾಸ್ ನಾಗ ಬಂಧಿತ ಆರೋಪಿಯಾಗಿದ್ದಾನೆ.
ಘಟನೆಯ ವಿವರ: ಹನೂರು ಪೊಲೀಸ್ ಠಾಣಾ ವ್ಯಾಪ್ತಿಯ ಚಂಗವಾಡಿ ಬಸ್ ನಿಲ್ದಾಣದ ಸಮೀಪ ವ್ಯಕ್ತಿಯೋರ್ವ ಅಕ್ರಮವಾಗಿ ಒಣ ಗಾಂಜಾ ಸಾಗಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ ಟಿ ಕವಿತಾ ಕೊಳ್ಳೇಗಾಲ ಉಪ ವಿಭಾಗದ ಡಿವೈಎಸ್ಪಿ ಧರ್ಮೇಂದ್ರ ರವರ ಮಾರ್ಗದರ್ಶನದಲ್ಲಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಮಂಜುನಾಥ್ ಪ್ರಸಾದ್ ಹಾಗೂ ಸಿಬ್ಬಂದಿಗಳು ದಾಳಿ ನಡೆಸಿದ್ದಾರೆ . ಈ ವೇಳೆ ಬಿಳಿ ಪ್ಲಾಸ್ಟಿಕ್ ಚೀಲದಲ್ಲಿ ಶೇಖರಣೆ ಮಾಡಿದ್ದ 2 ಲಕ್ಷ ಮೌಲ್ಯದ (4.735) ಗ್ರಾಂ ಒಣ ಗಾಂಜಾ ಹಾಗೂ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ಹನೂರು ತಾಲೂಕಿನ ಕೌದಳ್ಳಿ ಸಮೀಪದ ವ್ಯಕ್ತಿ ನೀಡಿರುವುದಾಗಿ ತಿಳಿಸಿದ್ದಾನೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ದಾಳಿಯಲ್ಲಿ ತಹಸಿಲ್ದಾರ್ ವೈಕೆ ಗುರುಪ್ರಸಾದ್, ಮುಖ್ಯಪೇದೆ ದೊಡ್ಡವೀರ ಶೆಟ್ಟಿ, ಕುಮಾರ್, ಪೇದೆಗಳಾದ ರಾಘವೇಂದ್ರ, ಪ್ರಭು, ಪ್ರಭಾಕರ್, ಚಂದ್ರಶೇಖರ್, ಚಾಲಕ ಶಿವಕುಮಾರ್ ಪಾಲ್ಗೊಂಡಿದ್ದರು.





