ಹನೂರು : ನೀರಿರುವ ಬಾವಿಗೆ ಬಿದ್ದಿದ್ದ ಶ್ವಾನವನ್ನು ರಕ್ಷಣೆ ಮಾಡುವಲ್ಲಿ ಅಗ್ನಿಶಾಮಕ ಠಾಣಾ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.
ಘಟನೆಯ ವಿವರ
ಹನೂರು ಪಟ್ಟಣದ ಆಂಜನೇಯ ದೇವಸ್ಥಾನ ಬೀದಿಯ ಆಟೋ ನಾರಾಯಣರವರಿಗೆ ಸೇರಿದ ಶ್ವಾನ ಮಂಗಳವಾರ ತಡರಾತ್ರಿ 80 ಅಡಿ ನೀರಿರುವ ಆಳವಾದ ಬಾವಿಗೆ ಆಕಸ್ಮಿಕವಾಗಿ ಬಿದ್ದಿದೆ. ಬುಧವಾರ ಬೆಳಗ್ಗೆ ಶ್ವಾನ ಬಾವಿಗೆ ಬಿದ್ದಿರುವುದು ಮಾಲೀಕ ನಾರಾಯಣ್ ಅವರಿಗೆ ಮಾಹಿತಿ ತಿಳಿದಿದೆ. ತಕ್ಷಣ ಅವರು ಶ್ವಾನವನ್ನು ಮೇಲೆತ್ತಲೂ ಇನ್ನಿಲ್ಲದ ಕಸರತ್ತು ಮಾಡಿದ್ದಾರೆ. ಆದರೆ ಪ್ರಯತ್ನ ವಿಫಲವಾದಾಗ ಅಗ್ನಿಶಾಮಕ ಠಾಣಾ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದಾರೆ.
ತಕ್ಷಣ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಪ್ರಭಾರಠಾಣಾಧಿಕಾರಿ ಮಹೇಶ್ ನೇತೃತ್ವದ ತಂಡ 43 ನಿಮಿಷಗಳ ಕಾಲ ಕಾರ್ಯಚರಣೆ ನಡೆಸಿ ನೀರಿರುವ ಬಾವಿಯಲ್ಲಿ ಬಿದ್ದಿದ್ದ ಶ್ವಾನವನ್ನು ಮೇಲೆತ್ತಿ ಸ್ಥಳದಲ್ಲಿದ್ದ ಮಾಲೀಕರಿಗೆ ಒಪ್ಪಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಪ್ರಭಾರ ಠಾಣಾಧಿಕಾರಿ ಮಹೇಶ್ ಸಿಬ್ಬಂದಿ ವರ್ಗದವರಾದ ದೀಪಕ್ ಲೋಕೇಶ್ ಭಂಡಾರಿ, ಚಂದ್ರಗೌಡ ಪಾಲ್ಗೊಂಡಿದ್ದರು.





