Mysore
22
clear sky

Social Media

ಭಾನುವಾರ, 15 ಮಾರ್ಚ್ 2026
Light
Dark

ಹನೂರು | ಸುಗಮ ಸಂಚಾರಕ್ಕೆ 4.5ಕೋಟಿ ವೆಚ್ಚದಲ್ಲಿ 2 ಸೇತುವೆ ನಿರ್ಮಾಣ

ಹನೂರು : ಮಳೆಗಾಲದ ಸಂದರ್ಭದಲ್ಲಿ ರೈತರು ಹಾಗೂ ನೆರೆಯ ತಮಿಳುನಾಡಿಗೆ ತರಕಾರಿ ತೆಗೆದುಕೊಂಡು ಹೋಗುತ್ತಿದ್ದ ವಾಹನ ಸವಾರರಿಗೆ ತೊಂದರೆಯಾಗುತ್ತಿದ್ದ ಹಿನ್ನೆಲೆ, ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ 4.5 ಕೋಟಿ ವೆಚ್ಚದಲ್ಲಿ 2 ಸೇತುವೆ ನಿರ್ಮಾಣ ಮಾಡಲಾಗುತ್ತಿದೆ ಎಂದು ಶಾಸಕ ಎಂ.ಆರ್.ಮಂಜುನಾಥ್ ತಿಳಿಸಿದರು.

ಹನೂರು ತಾಲೂಕಿನ ಲೊಕ್ಕನಹಳ್ಳಿ ಒಡೆಯರಪಾಳ್ಯ ಮಾರ್ಗ ಮಧ್ಯದ ಜಡೆತಡಿ ಹಳ್ಳಕ್ಕೆ 2.5 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ತಾಲೂಕಿನ ಪಿಜಿ ಪಾಳ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಡೆತಡಿ ಹಳ್ಳಕ್ಕೆ ಸುಮಾರು 50 ವರ್ಷಗಳ ಹಿಂದೆ ಪೈಪ್ ಅಳವಡಿಕೆ ಮಾಡಿ ಸೇತುವೆ ನಿರ್ಮಾಣ ಮಾಡಲಾಗಿತ್ತು. ಇದರಿಂದ ಮಳೆಗಾಲದ ಸಂದರ್ಭದಲ್ಲಿ ಬಿ.ಆರ್.ಟಿ ಹಾಗೂ ಹೊನಮೇಟಿ ಅರಣ್ಯ ಪ್ರದೇಶದಿಂದ ಹೆಚ್ಚಿನ ಪ್ರಮಾಣದಲ್ಲಿ ಮಳೆಯ ನೀರು ಬರುತ್ತಿದ್ದರಿಂದ ಹಲವು ಗಂಟೆಗಳ ಕಾಲ ನಿಂತಲ್ಲಿ ನಿಂತು ರೈತರು ತೊಂದರೆ ಅನುಭವಿಸುತ್ತಿದ್ದರು. ನಾನು ಸಹ ಎರಡು ಮೂರು ಬಾರಿ ಮಳೆಗಾಲದ ಸಂದರ್ಭದಲ್ಲಿ ಸಿಲುಕಿಕೊಂಡು ಕಷ್ಟವನ್ನು ಕಣ್ಣಾರೆ ನೋಡಿದ್ದೇನೆ. ಈ ನಿಟ್ಟಿನಲ್ಲಿ 2.5 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. ಸೇತುವೆ ನಿರ್ಮಾಣ ಮಾಡಲು ಕೆಲವು ರೈತರ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ ಅವರಿಗೆ ಸೂಕ್ತ ಪರಿಹಾರವೂ ಸಹ ನೀಡಲಾಗುತ್ತದೆ. ರೈತರು ಸಾರ್ವಜನಿಕ ಹಿತದೃಷ್ಟಿಯಿಂದ ಸೇತುವೆ ನಿರ್ಮಾಣ ಕಾಮಗಾರಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಗ್ರಾಪಂ ಮಾಜಿ ಸದಸ್ಯ ಬಿಳಿಗಿರಿ ಶೆಟ್ಟಿ ಮಾತನಾಡಿ, ಜಡೆತಡಿ ಹಳ್ಳಕ್ಕೆ ಸೇತುವೆ ನಿರ್ಮಾಣ ಮಾಡಿಕೊಡುವಂತೆ ಸುಮಾರು 20ಕ್ಕೂ ಹೆಚ್ಚು ವರ್ಷಗಳಿಂದ ಜನಪ್ರತಿನಿಧಿಗಳಿಗೆ ಮನವಿ ಮಾಡಿಕೊಂಡು ಬಂದಿದ್ದೇವೆ. ಆದರೆ ಇದುವರೆಗೂ ಯಾರೊಬ್ಬರು ಸ್ಪಂದಿಸಿರಲಿಲ್ಲ, ಶಾಸಕ ಮಂಜುನಾಥ್ ರವರಿಗೆ ಮನವಿ ಸಲ್ಲಿಸಿದ ದಿನವೇ ನಿಮಗೆ ಸೇತುವೆ ಮಾಡಿಕೊಳ್ಳುವುದಾಗಿ ಭರವಸೆ ನೀಡಿದ್ದರು. ಅದರಂತೆ ಇಂದು ಸೇತುವೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿದ್ದಾರೆ. ಇನ್ನು ಮೂರು ತಿಂಗಳಲ್ಲಿ ಸೇತುವೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಭರವಸೆ ನೀಡಿದ್ದಾರೆ ಕಾಮಗಾರಿ ಪೂರ್ಣಗೊಂಡ ನಂತರ ನಮ್ಮ ಭಾಗದ ರೈತರು ಹಾಗೂ ನೆರೆಯ ತಮಿಳುನಾಡಿಗೆ ಹೋಗುವ ತರಕಾರಿ ವಾಹನಗಳು, ಸಾರ್ವಜನಿಕರು ಇನ್ನಿತರರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

1.5 ಕೋಟಿ ವೆಚ್ಚದಲ್ಲಿ ಮಸ್ಕತಿಹಳ್ಳಕ್ಕೆ ಸೇತುವೆ ನಿರ್ಮಾಣ
ಪಿ.ಜಿ.ಪಾಳ್ಯ ಹಾಗೂ ಒಡೆಯರಪಾಳ್ಯ ಮಾರ್ಗ ಮಧ್ಯದಲ್ಲಿ ಬರುವ ಮಸ್ಕತಿ ಹಳ್ಳಕ್ಕೆ ಸೇತುವೆ ನಿರ್ಮಾಣ ಮಾಡದೇ ಇರುವುದರಿಂದ ವಾಹನ ಸವಾರರಿಗೆ ತೊಂದರೆಯಾಗಿತ್ತು. ಈ ನಿಟ್ಟಿನಲ್ಲಿ 1.5 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಾಣ ಮಾಡಲು ಕ್ರಮ ವಹಿಸಲಾಗಿದೆ ಎಂದರು.

ಕಾಡು ಪ್ರಾಣಿಗಳ ಹಾವಳಿ ತಪ್ಪಿಸಿ
ಲೊಕ್ಕನಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ನಿರಂತರವಾಗಿ ಕಾಡುಪ್ರಾಣಿಗಳ ಹಾವಳಿಯಿಂದ ರೈತರು ಬೆಳೆದ ಬೆಳೆಗಳನ್ನು ಸಂರಕ್ಷಣೆ ಮಾಡಿಕೊಳ್ಳುವುದೇ ದೊಡ್ಡ ಸವಾಲಾಗಿದೆ. ಪ್ರತಿನಿತ್ಯ ಆನೆ, ಚಿರತೆ ಕಾಟ ಹೆಚ್ಚಾಗಿರುವುದರಿಂದ ಜಮೀನಿನಲ್ಲಿ ಬೆಳೆದ ಬೆಳೆಗಳನ್ನು ಕಾವಲು ಕಾಯುವುದೇ ದೊಡ್ಡ ಸಮಸ್ಯೆಯಾಗಿದೆ ರಾತ್ರಿ ವೇಳೆ ಅಲ್ಲದೆ ಬೆಳಗಿನ ವೇಳೆಯೂ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ಶಾಶ್ವತವಾಗಿ ಕಾಡುಪ್ರಾಣಿಗಳ ಹಾವಳಿ ತಡೆಗಟ್ಟಲು ಸೂಕ್ತ ಕ್ರಮ ವಹಿಸಬೇಕು ಎಂದು ಮನವಿ ಮಾಡಿದರು.

ಈ ವೇಳೆ ಮಾತನಾಡಿದ ಶಾಸಕ ಎಂಆರ್ ಮಂಜುನಾಥ್, ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿರುವುದು ಗಮನಕ್ಕೆ ಬಂದಿದೆ. ಕಾಡು ಪ್ರಾಣಿಗಳ ಹಾವಳಿ ತಡೆಗಟ್ಟಲು ರೈಲ್ವೆ ಬ್ಯಾರಿಕೇಡ್, ಆನೆ ಕಂದಕ, ಸೋಲಾರ್ ತಂತಿಗಳನ್ನು ಅಳವಡಿಸಲು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಕಾಡುಪ್ರಾಣಿಗಳ ಹಾವಳಿ ತಪ್ಪಿಸಲು ಶಾಶ್ವತ ಪರಿಹಾರ ಹುಡುಕಲಾಗುವುದು ಎಂದರು.

ಹನೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಎರಡು ಸೇತುವೆ ಕಾಮಗಾರಿಗಳು ಪೂರ್ಣಗೊಳ್ಳದೆ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಬಗ್ಗೆ ಮಾಧ್ಯಮದವರು ಗಮನಕ್ಕೆ ತಂದರು. ಇವೇಳೇ ಶಾಸಕ ಎಂ ಆರ್ ಮಂಜುನಾಥ ಪ್ರತಿಕ್ರಿಯಿಸಿ ಇನ್ನು ಒಂದು ತಿಂಗಳೊಳಗೆ ಬಾಕಿ ಉಳಿದಿರುವ ಕಾಮಗಾರಿಯನ್ನು ಪೂರ್ಣಗೊಳಿಸಿ ಸಾರ್ವಜನಿಕರಿಗೆ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಲಾಗುವುದೇ ಎಂದು ಭರವಸೆ ನೀಡಿದರು.

ಇದೆ ವೇಳೆ ಮುಖಂಡರಾದ ಬಿಳಿಗಿರಿ ಮಹದೇವಸ್ವಾಮಿ, ಜಿ ಎಂ ಮಾದೇಶ್, ನಿಂಗಶೆಟ್ಟಿ , ಜಡೇರುದ್ರಸ್ವಾಮಿ, ಕೃಷ್ಣಮೂರ್ತಿ, ಸಿದ್ದರಾಜು, ಚಿಕ್ಕರಾಜಶೆಟ್ಟಿ, ಚಿನ್ನಸ್ವಾಮಿ, ಬೇಕ್ರಿ ಶಿವಕುಮಾರ್, ಸೆಲ್ವಂ, ಮಹೇಂದ್ರ,ರವಿ ಸಣ್ಣಮಾದ,ಸೋಮಶೇಖರ್, ನಾಗೇಂದ್ರ,ಮಧುಸೂದನ್, ಎಂ ಎಸ್ ಸಿ ಮಹದೇಸ್ವಾಮಿ,ಡಿ ಕೆ ರಾಜು,ನಾಗರಾಜು, ಪುನೀತ್,ಉದ್ದನೂರು ಶಾಂತಣ್ಣ,ಗಿರೀಶ್, ಪ್ರಮೋದ್, ನಟರಾಜು,ವೆಂಕಟೇಶ್,ಗೋವಿಂದ, ವಿಜಯ್ ಕುಮಾರ್, ನಟರಾಜು,ಪ್ರಭುಸ್ವಾಮಿ, ಸೇರಿದಂತೆ ಇನ್ನಿತರರು ಹಾಜರಿದ್ದರು.

 

Tags:
error: Content is protected !!