ಮಹೇಂದ್ರ ಹಸಗೂಲಿ: ಗುಂಡ್ಲುಪೇಟೆ ತಾಲ್ಲೂಕು ವರದಿಗಾರರು
ಗುಂಡ್ಲುಪೇಟೆ: ತಾಲ್ಲೂಕಿನ ಪಡಗೂರು ಗ್ರಾಮದ ಶಿವಕುಮಾರ್ ಎಂಬುವವರ ಜಮೀನಿನಲ್ಲಿ ಎರಡು ಚಿರತೆ ಮರಿಗಳನ್ನು ರಕ್ಷಣೆ ಮಾಡಲಾಗಿದೆ.
ಚಿರತೆ ಮರಿಗಳು ಸಿಕ್ಕಿದ್ದ ಹಿನ್ನೆಲೆಯಲ್ಲಿ ತಾಯಿ ಚಿರತೆ ಬರುವ ನಿರೀಕ್ಷೆಯ ಮೇರೆಗೆ ಜಮೀನಲ್ಲಿ ರಾತ್ರಿ ಬೋನ್‌ನಲ್ಲಿ ಚಿರತೆ ಮರಿ ಇರಿಸಲಾಗಿತ್ತು. ಆದರೆ ತಾಯಿ ಚಿರತೆ ಬಾರದ ಕಾರಣ ಬೋನಿನಲ್ಲಿದ್ದ ಚಿರತೆ ಮರಿಗಳನ್ನು ಗುಂಡ್ಲುಪೇಟೆ ಬಫರ್ ಜೋನ್ ವಲಯಕ್ಕೆ ತಂದು ಆರೈಕೆ ಮಾಡಲಾಗುತ್ತಿದೆ. ಮತ್ತೆ ಸಂಜೆ ಮರಿಗಳನ್ನು ಬೋನಿನಲ್ಲಿ ಇರಿಸಲಾಗುವುದು. ಎರಡ್ಮೂರು ದಿನಗಳವರೆಗೂ ತಾಯಿ ಚಿರತೆ ಕಾಣದಿದ್ದರೆ ಅವುಗಳನ್ನು ಪುನರ್ವಸತಿ ಕೇಂದ್ರಕ್ಕೆ ಕಳಿಸಲಾಗುವುದು ಎಂದು ವಲಯಾಧಿಕಾರಿ ಶಿವಕುಮಾರ್ ತಿಳಿಸಿದರು.
ಮರಿ ಚಿರತೆಗಳು ತಾಯಿ ಚಿರತೆಯ ಜೊತೆ ಇರಬೇಕಾದ್ದರಿಂದ ಚಿರತೆ ಸೆರೆಗೆ ಬೋನ್ ಇರಿಸಲಾಗಿದೆ. ಮರಿಗಳ ಹುಡುಕಾಟದಲ್ಲಿ ತಾಯಿ ಚಿರತೆ ಬೋನಿಗೆ ಬಿದ್ದರೆ ತಾಯಿ ಚಿರತೆ ಜೊತೆ ಮರಿ ಚಿರತೆಗಳನ್ನು ಕಾಡಿಗೆ ಬಿಡಲಾಗುತ್ತದೆ. ತಾಯಿ ಸಿಗದಿದ್ದರೆ ಮರಿಗಳನ್ನು ಪೋಷಣೆ ಮಾಡುವ ಉದ್ದೇಶದಿಂದ ಪುನರ್ವಸತಿ ಕೇಂದ್ರಕ್ಕೆ ಕಳಿಸಲಾಗುವುದು ಎಂದು ಅರಣ್ಯಾಧಿಕಾರಿ ತಿಳಿಸಿದರು.




