ಗುಂಡ್ಲುಪೇಟೆ : ಒಂದೇ ದಿನ 4 ಕರುಗಳನ್ನು ಕೊಂದು ಹಾಕಿದ್ದ ಚಿರತೆ ಕೊನೆಗೂ ಬೋನಿಗೆ ಬಿದ್ದಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಹೊಂಗಹಳ್ಳಿಯಲ್ಲಿ ಶುಕ್ರವಾರ ನಡೆದಿದೆ.
ಹೊಂಗಹಳ್ಳಿ ಗ್ರಾಮದ ನಾಗಪ್ಪ ಎಂಬವರ ಜಮೀನಿನಲ್ಲಿ ಇರಿಸಲಾಗಿದ್ದ ಕೊಟ್ಟಿಗೆ ಮಾದರಿ ಬೋನಿಗೆ ಅಂದಾಜು 4 ವರ್ಷದ ಚಿರತೆ ಸೆರೆಯಾಗಿದೆ. ಕಳೆದ 15 ದಿನಗಳ ಹಿಂದೆಯಷ್ಟೇ ನಾಗಪ್ಪ ಎಂಬುವವರಿಗೆ ಸೇರಿದ 4 ಕರುಗಳ ಮೇಲೆ ಚಿರತೆ ದಾಳಿ ನಡೆಸಿ ಕೊಂದು ಹಾಕಿ ಅದರಲ್ಲಿ ಒಂದನ್ನು ಹೊತ್ತೊಯ್ದಿತ್ತು. ಘಟನೆ ಬಳಿಕ ಚಿರತೆ ಸೆರೆಗೆ ಮದ್ದೂರು ವಲಯ ಅರಣ್ಯಾಧಿಕಾರಿಗಳು ಬೋನಿರಿಸಿದ್ದರು.





