ಚಾಮರಾಜನಗರ: ಖಾಸಗಿ ಫೈನಾನ್ಸ್ ಸಿಬ್ಬಂದಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಗುಂಡ್ಲುಪೇಟೆಯ ಅಶ್ವಿನಿ ಬಡಾವಣೆಯಲ್ಲಿ ನಡೆದಿದೆ.
ನಂಜನಗೂಡಿನ ನಾಗಣಪುರ ಗ್ರಾಮದ ಅಭಿಷೇಕ್(23)ಮೃತ ಯುವಕ. ಯುವಕ ಗುಂಡ್ಲುಪೇಟೆಯ ಖಾಸಗಿ ಫೈನಾನ್ಸ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಭಾನುವಾರ(ಜೂ.23) ರಾತ್ರಿ ಯಾರು ಇಲ್ಲದ ವೇಳೆ ಫೈನಾನ್ಸ್ ಕಚೇರಿಯಲ್ಲಿ ನೇಣುಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದ್ದು, ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ.
ಮಾಹಿತಿ ತಿಳಿದ ಗುಂಡ್ಲುಪೇಟೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದರು. ಬಳಿಕ ಮೃತದೇಹವನ್ನು ವಾರಸುದಾರರಿಗೆ ಹಸ್ತಾಂತರ ಮಾಡಲಾಯಿತು. ಘಟನೆ ಸಂಬಂಧ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.