ಹನೂರು: ನಕಲಿ ಕೀ ಬಳಸಿ ಖದೀಮರು ಮನೆಯ ಬೀರುವಿನಲ್ಲಿದ್ದ ಚಿನ್ನಾಭರಣ ಕದ್ದೊಯ್ದಿರುವ ಘಟನೆ ತಾಲ್ಲೂಕಿನ ಬಸಪ್ಪನದೊಡ್ಡಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಮಹದೇವ ಪ್ರಸಾದ್ ಎಂಬುವವರ ಮನೆಯಲ್ಲಿ ಈ ಘಟನೆ ನಡೆದಿದ್ದು, ಜೂನ್.7ರಂದು ಬೆಂಗಳೂರಿನಲ್ಲಿ ವಾಸವಾಗಿರುವ ಮಗನ ಮನೆಗೆ ಹೋಗಿದ್ದ ವೇಳೆ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ನಂತರ ಜೂನ್.12ರಂದು ಮನೆಗೆ ಮರಳಿದಾಗ ಮನೆಯಲ್ಲಿ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.
ನಕಲಿ ಕೀ ಬಳಸಿ ಮನೆಯ ಮುಂಭಾಗದ ಬಾಗಿಲ ಬೀಗ ತೆಗೆದು ಒಳ ಪ್ರವೇಶಿಸಿರುವ ಖದೀಮರು, ಬೀರುವಿನ ಬೀಗವನ್ನು ಮುರಿದು 162 ಗ್ರಾಂ ಚಿನ್ನ ಹಾಗೂ 2 ಲಕ್ಷ ನಗದನ್ನು ದೋಚಿ ಪರಾರಿಯಾಗಿದ್ದಾರೆ.
ಸ್ಥಳಕ್ಕೆ ರಾಮಾಪುರ ಠಾಣೆ ಪೊಲೀಸರು ಭೇಟಿ ನೀಡಿ ಶ್ವಾನದಳ ಮತ್ತು ಬೆರಳಚ್ಚು ತಜ್ಞರನ್ನು ಕರೆಯಿಸಿ ಪರಿಶೀಲನೆ ನಡೆಸಿದ್ದು, ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.





