ಹನೂರು: ಕೌಟುಂಬಿಕ ಕಲಹಕ್ಕೆ ಬೇಸತ್ತು ಒಂದೇ ಕುಟುಂಬದ ನಾಲ್ವರು ವಿಷ ಸೇವನೆ ಮಾಡಿರುವ ಘಟನೆ ಮಲೆಮಾದೇಶ್ವರ ಬೆಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.
ಮೈಸೂರು ಜಿಲ್ಲೆ ಕೆ ಆರ್ ನಗರ ತಾಲೂಕಿನ ಚಂದಗಾಲು ಗ್ರಾಮದ ಮಹಾದೇವ ನಾಯಕ ಮೃತಪಟ್ಟ ದುರ್ದೈವಿಯಾಗಿದ್ದಾರೆ. ಲೀಲಾವತಿ ಆಲಿಯಾಸ್ ಅನುಸೂಯ, ಗೌರಮ್ಮ, ರಿಷಿಕಾ ತೀವ್ರ ಅಸ್ವಸ್ಥಗೊಂಡು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಘಟನೆ ವಿವರ:
ಮಹದೇವ ನಾಯಕ ರವರ ಮೊಮ್ಮಗಳಾದ ರಿಷಿಕಾ ರವರು ಅನ್ಯ ಕೋಮಿನ ಯುವಕನ ಜೊತೆ ಪ್ರೀತಿ ಮಾಡುತ್ತಿದ್ದರು ಎನ್ನಲಾಗಿದೆ. ಯುವಕ ರಿಷಿಕ ಜೊತೆಗಿರುವ ಸಂದರ್ಭದಲ್ಲಿ ನಗ್ನ ವಾಗಿರುವ ವಿಡಿಯೋ ಹಾಗೂ ಫೋಟೋ ತೆಗೆದುಕೊಂಡು ಸ್ನೇಹಿತರು ಹಾಗೂ ಇತರರಿಗೆ ತೋರಿಸಿಕೊಂಡು ಕುಟುಂಬದವರನ್ನು ಬ್ಲಾಕ್ ಮೇಲ್ ಮಾಡಿದ್ದಾನೆ. ಈ ವಿಚಾರವಾಗಿ ಗಲಾಟೆಯು ನಡೆದು ಪೊಲೀಸ್ ಠಾಣೆ ಮೆಟ್ಟಿಲೇರಿ ದೂರು ಸಹ ನೀಡಲಾಗಿದೆ. ಆದರೆ ಕೆ ಆರ್ ನಗರ ಪೊಲೀಸರು ಪ್ರಕರಣ ದಾಖಲು ಮಾಡಿಕೊಳ್ಳದೆ ಹುಡುಗನನ್ನು ಕರೆಸಿ, ವಿಚಾರ ಮಾಡುವುದಾಗಿ ತಿಳಿಸಿದ್ದಾರೆ. ಇದರಿಂದ ನಮಗೆ ನ್ಯಾಯ ಸಿಗುವುದಿಲ್ಲ ಎಂದು ಹೆದರಿಕೊಂಡ ಮಾನ ಮರ್ಯಾದೆಗೆ ಅಂಜಿ ಒಂದೇ ಕುಟುಂಬದವರು ಮಲೆ ಮಹದೇಶ್ವರ ಬೆಟ್ಟಕ್ಕೆ ಹೋಗೋಣ ಎಂದು ಶುಕ್ರವಾರ ಮಧ್ಯಾಹ್ನ 2 ಗಂಟೆಯಿಂದಲೇ ಗ್ರಾಮದಿಂದ ತೆರಳಿದ್ದಾರೆ. ಶನಿವಾರ ಬೆಳಗ್ಗೆ ತಾಳು ಬೆಟ್ಟದ ಸಮೀಪ ವಿಷ ಸೇವನೆ ಮಾಡಿದ್ದಾರೆ ಎಂದು ವಿಚಾರ ತಿಳಿದು ಬಂದಿದೆ. ವಿಷ ಸೇವನೆಯಿಂದ ಮಹದೇವ ನಾಯಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇನ್ನು ಉಳಿದಂತೆ ಮೊಮ್ಮಗಳಾದ ರಿಷಿಕ ಕಾಮಗೆರೆ ಹೋಲಿ ಕ್ರಾಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಗೌರಮ್ಮ ಮತ್ತು ಅನುಸೂಯರವರು ಕೊಳ್ಳೇಗಾಲ ಉಪ ವಿಭಾಗ ಆಸ್ಪತ್ರೆಯಲ್ಲಿ ದಾಖಲಾಗಿ ಹೆಚ್ಚಿನ ಚಿಕಿತ್ಸೆಗೆ ಚಾಮರಾಜನಗರ ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಈ ಸಂಬಂಧ ಮಲೆ ಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.