ಕೊಳ್ಳೇಗಾಲ: ಕೆಆರ್‌ಎಸ್ ಮತ್ತು ಕಬಿನಿ ಜಲಾಶಯಗಳಿಂದ ಹೊರಹರಿವನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಳ ಮಾಡಿರುವ ಹಿನ್ನೆಲೆಯಲ್ಲಿ ಕೊಳ್ಳೇಗಾಲ ನದಿ ಪಾತ್ರದ ಜನರಲ್ಲಿ ಪ್ರವಾಹ ಆತಂಕ ಎದುರಾಗಿದೆ.
ಕಾವೇರಿ ಜಲಾನಯನ ಪ್ರದೇಶ ಹಾಗೂ ಕೇರಳದ ವಯನಾಡು ಭಾಗದಲ್ಲಿ ಭಾರೀ ಮಳೆಯಾಗುತ್ತಿರುವ ಪರಿಣಾಮ ಕೆಆರ್‌ಎಸ್ ಜಲಾಶಯ ಹಾಗೂ ಕಬಿನಿ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ಎರಡೂ ಜಲಾಶಯಗಳಿಂದಲೂ ಅಪಾರ ಪ್ರಮಾಣದ ನೀರನ್ನು ನದಿಗಳಿಗೆ ಬಿಡಲಾಗಿದೆ.
ಈ ಹಿನ್ನೆಲೆಯಲ್ಲಿ ಕಾವೇರಿ ಹಾಗೂ ಕಪಿಲಾ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ನದಿ ಪಾತ್ರದಲ್ಲಿ ವಾಸಿಸುತ್ತಿರುವ ಜನರು ಪ್ರವಾಹ ಪರಿಸ್ಥಿತಿ ಎದುರಿಸುತ್ತಿದ್ದಾರೆ.
ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ಕೊಳ್ಳೇಗಾಲದ ನದಿ ತೀರದ ಗ್ರಾಮಗಳಾದ ದಾಸನಪುರ, ಹಂಪಾಪರ, ಸರಗೂರು ಸೇರಿದಂತೆ ಅನೇಕ ಹಳ್ಳಿಗಳು ಜಲಾವೃತವಾಗುವ ಆತಂಕ ಎದುರಾಗಿದೆ. ಈಗಾಗಲೇ ಹತ್ತಾರು ಎಕರೆ ಜಮೀನು ಜಲಾವೃತಗೊಂಡಿದ್ದು, ನೀರಿನ ಹರಿವು ಮತ್ತಷ್ಟು ಹೆಚ್ಚಾದರೆ ಜನ-ಜಾನುವಾರುಗಳಿಗೆ ಭಾರೀ ಸಂಕಷ್ಟ ಎದುರಾಗಲಿದೆ.
ಈ ಹಳ್ಳಿಗಳಿಗೆ ಜಲಾಶಯದಿಂದ ನೀರು ಬಿಡುವುದಕ್ಕೂ ಮುಂಚೆಯೇ ಎಚ್ಚರಿಕೆ ನೀಡಲಾಗಿದ್ದು, ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು ಸಹ ಪ್ರವಾಹ ಉಂಟಾಗುವ ಪ್ರದೇಶಗಳಿಗೆ ಭೇಟಿ ನೀಡಿ ಸುರಕ್ಷತಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.