Mysore
17
overcast clouds

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ನದಿಗೆ ಇಳಿದು ಪ್ರತಿಭಟನೆಗೆ ಮುಂದಾದ ರೈತರಿಗೆ ತಡೆ

ಹನೂರು : ತಾಲ್ಲೂಕಿನ ಶೆಟ್ಟಳ್ಳಿ, ಮಾರ್ಟಳ್ಳಿ, ಕುರಟ್ಟಿ ಹೊಸೂರು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಗ್ರಾಮಗಳಿಗೆ ಕಾವೇರಿ ನದಿ ಮೂಲದಿಂದ ಕುಡಿಯುವ ನೀರು ಕಲ್ಪಿಸುವಂತೆ ಒತ್ತಾಯಿಸಿ ನದಿಗೆ ಇಳಿದು ಪ್ರತಿಭಟನೆ ಮಾಡಲು ತೆರಳಿದ್ದ ರೈತ ಮುಖಂಡರನ್ನು ತಹಸಿಲ್ದಾರ್ ಚೈತ್ರ ನೇತೃತ್ವದಲ್ಲಿ ರಾಮಾಪುರ ಪೊಲೀಸರು ತಡೆದ ಘಟನೆ ನಡೆಯಿತು.

ಪ್ರತಿಭಟನಾನಿರತ ರೈತರು ನಾಲ್‌ರೋಡ್ ಗ್ರಾಮದಿಂದ ಬೈಕ್ ರ‍್ಯಾಲಿಯಲ್ಲಿ ಹೊರಟು ಮಾರ್ಟಳ್ಳಿ, ವಡಕೆಹಳ್ಳ, ಕೌದಳ್ಳಿ, ಶೆಟ್ಟಳ್ಳಿ, ಕುರಟ್ಟಿ ಹೊಸೂರು, ದಂಟಳ್ಳಿ ಮಾರ್ಗವಾಗಿ ಕಾವೇರಿ ನದಿಗೆ ತೆರಳಿ ನದಿಯಲ್ಲಿ ಇಳಿದು ಪ್ರತಿಭಟನೆ ನಡೆಸಲು ತಯಾರಿ ಮಾಡಿಕೊಂಡಿದ್ದರು. ಆದರೆ ಪೊಲೀಸರು ರೈತರನ್ನು ಮಾರ್ಗಮಧ್ಯದಲ್ಲಿಯೇ ತಡೆದಿದ್ದಾರೆ.

ಈ ವೇಳೆ ರೈತ ಮುಖಂಡರು, ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಕಾವೇರಿ ನದಿಯ ನೀರನ್ನು ಬಳಕೆ ಮಾಡದೆ ತಮಿಳುನಾಡಿಗೆ ಹರಿಬಿಟ್ಟಿರುವ ಧೋರಣೆಯನ್ನು ಖಂಡಿಸಿ ಹಾಗೂ ನಮ್ಮ ಭಾಗದ ರೈತರಿಗೆ ನೀರು ಕೊಡದ ಸರ್ಕಾರದ ನಿರ್ಲಕ್ಷ್ಯವನ್ನು ಖಂಡಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಶೈಲೇಂದ್ರ ಮಾತನಾಡಿ, ಕಾವೇರಿ ನದಿ ಹತ್ತಿರದಲ್ಲಿಯೇ ಹರಿಯುತ್ತಿದ್ದರೂ ಹನೂರು ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿಂದ ತೊಂದರೆ ಅನುಭವಿಸುತ್ತಿದ್ದಾರೆ. ಈ ಭಾಗದ ಕೆರೆ ಹಾಗೂ ಜಲಾಶಯಗಳಿಗೆ ಪೈಪ್‌ಲೈನ್ ಮೂಲಕ ನೀರು ಸರಬರಾಜು ಮಾಡುವಂತೆ ರೈತರು ಹಲವಾರು ಬಾರಿ ಸರ್ಕಾರಕ್ಕೆ ಮನವಿ ಮಾಡಿದ್ದರು ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಸರ್ಕಾರ ಕಡಿಮೆ ಅನುದಾನದಲ್ಲಿ ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ಮಾಡಬಹುದು. ಕಾವೇರಿ ನದಿಯಿಂದ ಹಾಲೇರಿಕೆರೆ, ಕೀರೆಪಾತಿ ಕೆರೆಗಳನ್ನು ಅಭಿವೃದ್ಧಿ ಪಡಿಸಿದರೆ ಅಂತರ್ಜಲ ಮಟ್ಟ ಹೆಚ್ಚಾಗಿ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ. ಇದರಿಂದ ಉದ್ಯೋಗ ಅರಸಿ ನೆರೆಯ ರಾಜ್ಯ, ಜಿಲ್ಲೆಗಳಿಗೆ ಹೋಗಿರುವ 37 ಸಾವಿರ ಜನರು ಮತ್ತೆ ಗ್ರಾಮಕ್ಕೆ ವಾಪಸ್ ಬರಲಿದ್ದಾರೆ. ಇದಲ್ಲದೆ ಪ್ರಾಣಿ-ಪಕ್ಷಿ ಜಾನುವಾರಗಳಿಗೂ ಅನುಕೂಲವಾಗಲಿದೆ ಎಂದರು.

ಕಾವೇರಿ ನದಿಗೆ ಸೇತುವೆ ನಿರ್ಮಾಣ ಮಾಡುವುದರಿಂದ ಪ್ರವಾಸೋದ್ಯಮಕ್ಕೆ ಹೆಚ್ಚಿನ ಅನುಕೂಲವಾಗಲಿದೆ. ಉದ್ಯೋಗ ಅರಸಿ ಬೆಂಗಳೂರಿಗೆ ಹೋಗಿರುವ ಯುವಕ ಯುವತಿಯರಿಗೂ ಹೆಚ್ಚಿನ ಅನುಕೂಲವಾಗಲಿದೆ. ಇದಲ್ಲದೆ ರೈತರು ಬೆಳೆಯುವ ತರಕಾರಿಗಳನ್ನು ಬೆಂಗಳೂರಿಗೆ ಸುಲಭವಾಗಿ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಲು ಅನುಕೂಲವಾಗುತ್ತದೆ ಎಂದರು.

ಮಾರ್ಟಳ್ಳಿ ಗ್ರಾಮದ ರೈತ ಮುಖಂಡರು ಮಾತನಾಡಿ, ಅರಣ್ಯ ಪ್ರದೇಶಗಳಲ್ಲಿ ಪ್ರತಿನಿತ್ಯ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗುತ್ತಿದೆ. ಇದನ್ನು ತಡೆಗಟ್ಟಲು ಅರಣ್ಯ ಇಲಾಖೆಯವರು ಶಾಶ್ವತ ಕ್ರಮ ವಹಿಸಬೇಕು. ಸಂಬಂಧ ಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕು ಎಂದರು.

ತಹಸಿಲ್ದಾರ್ ಚೈತ್ರ ಮಾತನಾಡಿ, ರೈತರು ಕಾವೇರಿ ನದಿಯಿಂದ ಗ್ರಾಮಗಳಿಗೆ ಕುಡಿಯುವ ನೀರು ಹರಿಸುವ ಯೋಜನೆಯನ್ನು ಶೀಘ್ರವೇ ಮಾಡಿಕೊಡಬೇಕೆಂಬುದು ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಇಟ್ಟಿದ್ದಾರೆ . ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಕೊಳ್ಳೇಗಾಲ ತಾಲ್ಲೂಕು ಸಂಚಾಲಕ ಮಹೇಶ್, ಮಾರ್ಟಳ್ಳಿ ಗ್ರಾಮ ಘಟಕದ ಅಧ್ಯಕ್ಷ ಅರ್ಪುದರಾಜ್, ರೈತ ಮುಖಂಡರುಗಳಾದ ಪೆರಿಯ ನಾಯಗಂ, ಪೊನ್ನು ಸ್ವಾಮಿ, ಜಾನ್‌ಕೆನಡಿ, ಕೆಂಪರಾಜು, ಶಿವಣ್ಣ, ವೆಂಕಟೇಶ್, ಸಗಾಯಮೇರಿ, ಬಸವರಾಜು, ಸೇಟು, ಇನ್ನಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Tags:
error: Content is protected !!