Mysore
23
broken clouds

Social Media

ಗುರುವಾರ, 26 ಡಿಸೆಂಬರ್ 2024
Light
Dark

ರೈತರು ಸಹಜ ಕೃಷಿ ಪದ್ದತಿ ಅಳವಡಿಸಿಕೊಳ್ಳಲು ಶಾಸಕ ಪುಟ್ಟರಂಗಶೆಟ್ಟಿ ಸಲಹೆ    

ಚಾಮರಾಜನಗರ: ಕೃಷಿ ಭೂಮಿಗೆ ಬಳಸುವ ರಾಸಾಯನಿಕ ಗೊಬ್ಬರದಿಂದ ಮಣ್ಣು ವಿಷಕಾರಿಯಾಗುತ್ತಿದ್ದು, ಸಾವಯವ (ಕೊಟ್ಟಿಗೆ) ಗೊಬ್ಬರವನ್ನು ಬಳಸುವ ಸಹಜ ಕೃಷಿ ಪದ್ದತಿ ಅಳವಡಿಸಿಕೊಳ್ಳುವಂತೆ ಎಂ.ಎಸ್.ಐ.ಎಲ್ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ  ಸಲಹೆ ನೀಡಿದರು.
ಚಾಮರಾಜನಗರ ಜಿಲ್ಲಾ ದಸರಾ ಮಹೋತ್ಸವದ ಅಂಗವಾಗಿ ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಬುಧುವಾರ ಆಯೋಜಿಸಲಾಗಿದ್ದ ‘ರೈತ ದಸರಾ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ವೇದಿಕೆ ಮುಂಭಾಗದಲ್ಲಿ ಸಿರಿಧಾನ್ಯಗಳಿಂದ ಅಲಂಕರಿಸಿದ್ದ ರಾಗಿ ಕಣಕ್ಕೆ ಪೂಜೆ ನೆರವೇರಿಸಿ, ರೈತನಾಯಕ ಪ್ರೊ. ನಂಜುಂಡಸ್ವಾಮಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.
ದೇಶದಲ್ಲಿ ಏರುತ್ತಿರುವ ಜನಸಂಖ್ಯೆಗನುಗುಣವಾಗಿ ನಾವು ಆಹಾರವನ್ನು ದ್ವಿಗುಣಗೊಳಿಸಬೇಕಾಗಿದೆ. ಕೃಷಿಭೂಮಿಗೆ ರಾಸಾಯನಿಕ ಗೊಬ್ಬರವನ್ನು ಯತೇಚ್ಛವಾಗಿ ಬಳಸುವುದಲ್ಲದೆ, ಬೆಳೆಗಳಿಗೆ ಸಿಂಪಡಿಸುವ ಔಷಧಿಯು ವಿಷಕಾರಿಯಾಗಿದೆ. ಇದು ಆರೋಗ್ಯಕ್ಕೆ ಹಾನಿಕರ. ಹೆಚ್ಚು ವಿಷ ಉಣಿಸಿದಷ್ಟು ಭೂಮಿ ನಮಗೂ ವಿಷ ಉಣಿಸಲಿದೆ. ಈ ನಿಟ್ಟಿನಲ್ಲಿ ರೈತರು ಸಾವಯವ ಕೃಷಿ ಪದ್ದತಿ ಅಳವಡಿಸಿಕೊಳ್ಳಬೇಕು. ಆಧುನಿಕ ಯಂತ್ರೋಪಕರಣಗಳ ಬಳಕೆ ಕುರಿತು ಅಧಿಕಾರಿಗಳು ಹೋಬಳಿಮಟ್ಟದಲ್ಲಿ ಕಾರ್ಯಾಗಾರ ಏರ್ಪಡಿಸಿ ರೈತರಿಗೆ ಅರಿವು ಮೂಡಿಸಬೇಕು ಎಂದು ತಿಳಿಸಿದರು.
ಕಾವೇರಿ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪಿ. ಮರಿಸ್ವಾಮಿ ಮಾತನಾಡಿ, ರೈತ ದಸರಾ ಇದೊಂದು ಸುಂದರ ಕಾರ್ಯಕ್ರಮವಾಗಿದೆ. ಮೈಸೂರಿನಿಂದ ಪ್ರತ್ಯೇಕ ಜಿಲ್ಲೆಯಾದ ಬಳಿಕ ಜಯಚಾಮರಾಜೇಂದ್ರ ಒಡೆಯರ್ ಜನ್ಮತಳೆದ ಚಾಮರಾಜನಗರದಲ್ಲೂ ದಸರಾ ನಡೆಸುವ ಸದುದ್ದೇಶ ಔಚಿತ್ಯಪೂರ್ಣವಾಗಿದೆ. ರೈತರೊಂದಿಗೆ ನಾವೆಲ್ಲರೂ ಬೆರೆಯುವ ಅವಕಾಶವನ್ನು ರೈತ ದಸರಾ ಒದಗಿಸಿದೆ. ಆಧುನಿಕ ಕೃಷಿ ಪದ್ದತಿಯಲ್ಲಿ ಡ್ರೋನ್ ಮೂಲಕ ಔಷಧಿ ಸಿಂಪಡಣೆ ಬಗ್ಗೆ ಹೋಬಳಿಮಟ್ಟದಲ್ಲಿ ರೈತರಿಗೆ ಹೆಚ್ಚಿನ ಅರಿವು ಮೂಡಿಸುವುದು ಅಗತ್ಯವಾಗಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಮಾತನಾಡಿ, ರೈತ ದಸರಾ ಚೆಲುವ ಚಾಮರಾಜನಗರ ದಸರಾ ಮಹೋತ್ಸವದ ಒಂದು ಭಾಗವಾಗಿದೆ. ರೈತರು ಮತ್ತು ಅಧಿಕಾರಿಗಳ ನಡುವೆ ಉತ್ತಮ ಬಾಂಧವ್ಯ ಗಟ್ಟಿಗೊಳಿಸಲು ರೈತ ದಸರಾವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಜೈ ಜವಾನ್, ಜೈ ಕಿಸಾನ್, ರೈತರು ದೇಶದ ಬೆನ್ನುಲುಬು. ನಾವು ಸಹ ರೈತ ಕುಟುಂಬದಿಂದ ಬಂದವರು. ಅನ್ನ ನೀಡುವ ರೈತರಿಂದಲೇ ನಾವೆಲ್ಲರೂ ಬದುಕಬೇಕಾಗಿದೆ. ರೈತರಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಸಮಗ್ರ ಹಾಗೂ ಸಾವಯವ ಕೃಷಿ ಪದ್ದತಿಗೆ ಒತ್ತು ನೀಡಲಾಗಿದೆ. ರೈತ ದಸರಾ ಪ್ರಯುಕ್ತ ಏರ್ಪಡಿಸಲಾಗಿರುವ ತಾಂತ್ರಿಕ ಕಾರ್ಯಾಗಾರವನ್ನು ರೈತರು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ರೈತಗೀತೆಯನ್ನು ಉಲ್ಲೇಖಿಸಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ.ಕವಿತ, ರಾಜ್ಯಗಳು ಉದಿಸಲಿ.. ಅಳಿಯಲಿ.. ಹಾರಲಿ ಗದ್ದುಗೆ ಮುಕುಟಗಳು.. ಬಿತ್ತುಳು ಉದನವ ಬಿಡುವುದೇ ಇಲ್ಲ, ಕಾಯಕ ಗುಣ, ಶ್ರದ್ಧೆ ರೈತರಿಗೆ ತಂತಾನೆ ಬಂದಿದೆ. ತಾವು ಬೆಳೆದು ಇತರರ ಹೊಟ್ಟೆ ತುಂಬಿಸುವ ರೈತರ ಕಾಯಕ ಸಂಸ್ಕೃತಿ ಶ್ರೇಷ್ಠವಾದದ್ದು. ಇತ್ತೀಚೆಗೆ ಪ್ರತಿಯೊಂದು ಆಹಾರವು ಕಲಬೆರಕೆಯಾಗುತ್ತಿದ್ದು, ಇದನ್ನು ತಡೆಯಲು ರೈತರು ಬೆಳೆದ ಆಹಾರ ಪದಾರ್ಥಗಳನ್ನು ನೇರವಾಗಿ ರೈತರಿಂದಲೇ ಖರೀದಿಸುವುದು ಉತ್ತಮ ಎಂದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಹಮ್ಮದ್ ಅಸ್ಗರ್ ಮುನ್ನಾ, ನಗರಸಭೆ ಉಪಾಧ್ಯಕ್ಷರಾದ ಮಮತ, ರೈತ ಮುಖಂಡರಾದ ಅಣಗಳ್ಳಿ ಬಸವರಾಜು, ನಾಗಪ್ಪ ಅವರು ಕಾರ್ಯಕ್ರಮದಲ್ಲಿ ರೈತ ದಸರಾ ಉದ್ದೇಶದ ಕುರಿತು ಮಾತನಾಡಿದರು. ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಅಬೀದ್, ಉಪನಿರ್ದೇಶಕರಾದ ಸುಷ್ಮಾ, ಕೃಷಿಕ ಸಮಾಜದ ತಾಲೂಕು ಅಧ್ಯಕ್ಷರಾದ ರಾಘವೇಂದ್ರ ನಾಯ್ಡು, ರೈತ ಮುಖಂಡರಾದ ಗುಂಡ್ಲುಪೇಟೆಯ ಸಂಪತ್, ಶಿವಪುರ ಮಹದೇವಪ್ಪ, ಹೊನ್ನೂರು ಬಸವಣ್ಣ, ಸಿದ್ದರಾಜು, ಬಸವರಾಜು, ರಾಮಕೃಷ್ಣ, ಅಮ್ಜದ್ ಖಾನ್, ಕೃಷಿ ಯಂತ್ರೋಪಕರಣಗಳ ಮಾರಾಟ ಸಂಘದ ಅಧ್ಯಕ್ಷರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Tags: