ಗುಂಡ್ಲುಪೇಟೆ: ತಾಲ್ಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಖಾಸಗಿ ವಾಹನಗಳ ಸಂಚಾರಕ್ಕೆ ಅವಕಾಶ ನೀಡಿದ್ದ ಹಿನ್ನೆಲೆಯಲ್ಲಿ ಸಿಡಿದೆದ್ದ ರೈತರು ಅರಣ್ಯಾಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ಗೋಪಾಲಸ್ವಾಮಿ ಬೆಟ್ಟದ ಗೇಟ್ ಬಳಿ ಜಮಾಯಿಸಿದ ರೈತರು, ಅರಣ್ಯಾಧಿಕಾರಿಗಳ ವಿರುದ್ಧ ವಿವಿಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ರೈತರು, ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಖಾಸಗಿ ವಾಹನಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಆದರೂ ಅರಣ್ಯ ಇಲಾಖೆ ಅಧಿಕಾರಿಗಳು ಶೂಟಿಂಗ್ ಮಾಡಲು ಖಾಸಗಿ ವಾಹನಕ್ಕೆ ಅವಕಾಶ ನೀಡಿದ್ದಾರೆ. ಕೇರಳ ರಾಜ್ಯದ ಖಾಸಗಿ ವಾಹನಗಳು ನೂರಾರು ಮಂದಿಯನ್ನು ಕರೆದೊಯ್ದು ಬೆಟ್ಟದಲ್ಲಿ ಶೂಟಿಂಗ್ ನಡೆಸಿವೆ. ಬೆಟ್ಟಕ್ಕೆ ತೆರಳಬೇಕಾದರೆ ಸರ್ಕಾರಿ ಬಸ್‌ನಲ್ಲಿ ಮಾತ್ರ ಅವಕಾಶವಿದೆ. ಖಾಸಗಿ ವಾಹನಕ್ಕೆ ಅವಕಾಶವೇ ಇಲ್ಲ. ಆದರೂ ಖಾಸಗಿ ವಾಹನಗಳನ್ನು ಬಿಡಲಾಗಿದೆ. ಈ ಹಿನ್ನೆಲೆಯಲ್ಲಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಿ ಎಂದು ಆಗ್ರಹಿಸಿದ್ದಾರೆ.




