ಹನೂರು : ಮುಂದಿನ ದಿನಗಳಲ್ಲಿ ತಮಿಳುನಾಡು ವಿಧಾನಸಭೆ ಚುನಾವಣೆ ನಡೆಯಲಿದ್ದು ಯಶಸ್ವಿಯಾಗಿ ನಡೆಸಲು ಕರ್ನಾಟಕ ಪೊಲೀಸರು ಹಾಗೂ ಅಬಕಾರಿ ಇಲಾಖೆ ವತಿಯಿಂದ ಎಲ್ಲಾ ರೀತಿಯ ಸಹಕಾರ ನೀಡಬೇಕು ಎಂದು ಸೇಲಂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೌತಮ್ ಗೋಯಲ್ ಹೇಳಿದರು.
ತಮಿಳುನಾಡಿನ ಮೇಟೂರು ಮೋಹನ್ ರೆಸಿಡೆನ್ಸಿ ಹೋಟೆಲ್ ನಲ್ಲಿ ಚುನಾವಣಾ ಸಂಬಂಧ ನಡೆದ ಅಂತರರಾಜ್ಯ ಗಡಿ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ತಮಿಳುನಾಡು ರಾಜ್ಯಾದ್ಯಂತ ವಿಧಾನಸಭಾ ಚುನಾವಣೆಗೆ ಈಗಾಗಲೇ ಕ್ಷಣಗಣನೆ ಪ್ರಾರಂಭವಾಗಿದೆ. ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ನೀತಿ ಸಂಹಿತೆ ಪ್ರಾರಂಭವಾಗಲಿದ್ದು ಚುನಾವಣೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಯಶಸ್ವಿಯಾಗಿ ನಡೆಸಲು ಕರ್ನಾಟಕ ಪೊಲೀಸ್ ಹಾಗೂ ಅಬಕಾರಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಹಕಾರ ಅತಿ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಎಲ್ಲ ರೀತಿಯ ಸಹಕಾರ ನೀಡಬೇಕು ಎಂದರು.
ಕಳೆದ ಚುನಾವಣಾ ಸಂದರ್ಭದಲ್ಲಿ ಅಕ್ರಮ ಹಣ ವರ್ಗಾವಣೆ, ಮದ್ಯ ಸಾಗಣೆ ಸೇರಿದಂತೆ ಚುನಾವಣೆಯಲ್ಲಿ ಮತದಾರರನ್ನು ಆಕರ್ಷಿಸಲು ಗೃಹಪಯೋಗಿ ವಸ್ತುಗಳ ಸಾಗಾಟ ಸೇರಿದಂತೆ ಇನ್ನಿತರ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಿಗಳ ಮಾಹಿತಿ ನೀಡಿದರೆ ಹೆಚ್ಚಿನ ನಿಗಾ ವಹಿಸಲಾಗುವುದು, ತಮಿಳುನಾಡಿನ ಆರೋಪಿಗಳು ಕರ್ನಾಟಕದಲ್ಲಿದ್ದರೆ ಅಂತಹವರ ವಿರುದ್ಧ ತಾವು ನಿಗಾವಹಿಸಬೇಕು, ಕರ್ನಾಟಕ ಹಾಗೂ ತಮಿಳುನಾಡಿನ ಗಡಿಗಳಲ್ಲಿ ಹೆಚ್ಚಿನ ಪೊಲೀಸ್ ಹಾಗೂ ಅಬಕಾರಿ ಪೊಲೀಸರನ್ನು ನೇಮಕ ಮಾಡಬೇಕು ಎಂದು ಮನವಿ ಮಾಡಿದರು.
ತಮಿಳುನಾಡು ರಾಜ್ಯಾದ್ಯಂತ ಗುಟ್ಕಾ ನಿಷೇಧ ಜಾರಿಯಲ್ಲಿದೆ. ಆದರೂ ಕರ್ನಾಟಕದಿಂದ ಕೆಲವರು ಹಣದಾಸೆಗೆ ಸಾಗಾಟ ಮಾಡುತ್ತಿದ್ದಾರೆ ಇಂತಹವರನ್ನು ಚೆಕ್ ಪೋಸ್ಟ್ ಗಳಲ್ಲಿ ತಪಾಸಣೆ ಮಾಡಿ ಪ್ರಕರಣ ದಾಖಲಿಸಬೇಕು ಎಂದು ಮನವಿ ಮಾಡಿದರು.
ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುತ್ತುರಾಜು ಮಾತನಾಡಿ, ಕರ್ನಾಟಕ ಹಾಗೂ ತಮಿಳುನಾಡಿನ ಗಡಿ ಚೆಕ್ ಪೋಸ್ಟ್ ಗಳಲ್ಲಿ ಪೊಲೀಸ್ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ವರ್ಗದವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ತಮಿಳುನಾಡು ವಿಧಾನಸಭಾ ಚುನಾವಣೆಗೆ ದಿನಾಂಕ ನಿಗದಿಯಾದ ನಂತರ ಪಾಲಾರ್ ಗರಿಕೆಕಂಡಿ ಅರ್ಧನಾರೀಪುರ, ಪುಣಜನೂರು, ಮದ್ದೂರು ಸೇರಿದಂತೆ ಇನ್ನಿತರ ಚೆಕ್ ಪೋಸ್ಟ್ ಗಳಲ್ಲಿ ಹೆಚ್ಚಿನ ಸಿಬ್ಬಂದಿಗಳನ್ನು ನಿಯೋಜಿಸಲಾಗುವುದು, ಗುಟ್ಕಾ ಸಾಗಾಟ ಸೇರಿದಂತೆ ಯಾವುದೇ ಅಪರಾಧ ಕೃತ್ಯಗಳು ಕಂಡುಬಂದರೆ ಅಂತಹ ವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡು ಪ್ರಕರಣ ದಾಖಲಿಸಲಾಗುವುದು ಒಟ್ಟಾರೆ ಚುನಾವಣೆ ಯಶಸ್ವಿಗೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ಅಬಕಾರಿ ನಿರೀಕ್ಷಕ ದಯಾನಂದ ಮಾತನಾಡಿ, ಕೊಳ್ಳೇಗಾಲ ವ್ಯಾಪ್ತಿಯಲ್ಲಿ ಒಡೆಯರ ಪಾಳ್ಯ, ನಾಲ್ ರೋಡ್ ಹೂಗ್ಯಂ, ಗೋಪಿನಾಥಂ ಗ್ರಾಮಗಳ ವ್ಯಾಪ್ತಿಯಲ್ಲಿ ಹತ್ತಕ್ಕೂ ಹೆಚ್ಚು ಬಾರ್ ಗಳಿದ್ದು ಚುನಾವಣಾ ಸಂದರ್ಭದಲ್ಲಿ ಈ ಬಾರ್ ಗಳ ಮೇಲೆ ಹೆಚ್ಚಿನ ನಿಗಾವಹಿಸಲಾಗುವುದು. ಹಿರಿಯ ಅಧಿಕಾರಿಗಳು ಆದೇಶ ಹೊರಡಿಸಿದರೆ ನಮ್ಮ ಇಲಾಖೆ ವತಿಯಿಂದಲೂ ಚೆಕ್ಪೋಸ್ಟ್ ಗಳಲ್ಲಿ ಸಿಬ್ಬಂದಿಗಳನ್ನು ನೇಮಕ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಈರೋಡ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿರುಮತಿ ಎ.ಸುಜಾತ, ಮೇಟೂರು ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಸುಕುಮಾರ್, ಮೇಟೂರು ಡಿವೈಎಸ್ಪಿ ಷಣ್ಮುಗಂ ಸುಂದರಂ ಮಲೆ ಮಹದೇಶ್ವರ ಬೆಟ್ಟ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಜಗದೀಶ್ ಸೇರಿದಂತೆ ತಮಿಳುನಾಡಿನ ವಿವಿಧ ಪೊಲೀಸ್ ಠಾಣೆಗಳ ಇನ್ಸ್ಪೆಕ್ಟರ್ ಹಾಗೂ ಅಬಕಾರಿ ನಿರೀಕ್ಷಕರುಗಳು ಹಾಜರಿದ್ದರು.




