ಹನೂರು: ತಾಲ್ಲೂಕಿನ ತಾಳಬೆಟ್ಟದಿಂದ ಮಲೆ ಮಹದೇಶ್ವರ ಬೆಟ್ಟದ ಮಾರ್ಗಮಧ್ಯದಲ್ಲಿನ ಅರಣ್ಯದಲ್ಲಿ ಕಾಡಾನೆಗಳು ಕಾಣಿಸಿಕೊಳ್ಳುತ್ತಿರುವುದರಿಂದ ಮ.ಬೆಟ್ಟಕ್ಕೆ ದ್ವಿಚಕ್ರ ವಾಹನಗಳಲ್ಲಿ ಹಾಗೂ ಪಾದಯಾತ್ರೆಯ ಮೂಲಕ ತೆರಳುವವರು ಮುನ್ನೆಚ್ಚರಿಕೆ ಕ್ರಮ ವಹಿಸಿ ತೆರಳುವಂತೆ ಪ್ರಜ್ಞಾವಂತ ನಾಗರಿಕರು ಮನವಿ ಮಾಡಿದ್ದಾರೆ.
ತಾಳಬೆಟ್ಟದಿಂದ ಮ.ಬೆಟ್ಟಕ್ಕೆ ಹೋಗುವ ಮಾರ್ಗ ಮಧ್ಯದಲ್ಲಿ ಕಾಡಾನೆಗಳು ಬೆಳಗಿನ ವೇಳೆಯೇ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿರುವುದರಿಂದ ವಾಹನ ಸವಾರರು ಆತಂಕದಲ್ಲಿಯೇ ತೆರಳುತ್ತಿದ್ದಾರೆ.
ಭಾನುವಾರ ಮಧ್ಯಾಹ್ನ ಕಾಡಾನೆಯೊಂದು ಮೇವನ್ನು ಅರಸಿ ಬಂದು ರಸ್ತೆ ಬಳಿಯೇ ನಿಂತಿರುವುದನ್ನು ದಾರಿಹೋಕರು ಮೊಬೈಲ್‌ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ.
ಒಂದು ತಿಂಗಳಿನಿಂದ ಕಾಡಾನೆಗಳು ನಿರಂತರವಾಗಿ ಮಾರ್ಗ ಮಧ್ಯದಲ್ಲಿಯೇ ಚಲಿಸುತ್ತಿರುವುದು, ಚೆಕ್ ಡ್ಯಾಮ್‌ನಲ್ಲಿ ಜಲ ಕ್ರೀಡೆಯಲ್ಲಿ ತೊಡಗುವುದು ಮಾಡುತ್ತಿರುವುದರಿಂದ ಮ.ಬೆಟ್ಟ ಹಾಗೂ ಕಾಡಂಚಿನ ಗ್ರಾಮಗಳಿಗೆ ಹೋಗುವ ಸಾರ್ವಜನಿಕರು ಬೆಳಗಿನ ವೇಳೆಯಲ್ಲಿ ಪ್ರಯಾಣ ಮಾಡಬೇಕು. ರಾತ್ರಿಯ ವೇಳೆ ಅನಗತ್ಯವಾಗಿ ಪ್ರಯಾಣ ಮಾಡಬಾರದು ಎಂದು ಸಲಹೆ ನೀಡಿದ್ದಾರೆ.





