ಕೊಳ್ಳೇಗಾಲ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ರಸ್ತೆಯಲ್ಲಿರುವ ಸಾಕಮ್ಮಾಸ್ ಕಾಫಿ ಪುಡಿ ಅಂಗಡಿ ಬುಧವಾರ ರಾತ್ರಿ ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ.
ಸುಮಾರು ರಾತ್ರಿ 8.30ರಲ್ಲಿ ಸಾಕಮ್ಮಾಸ್ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಧಗಧಗನೆ ಹೊತ್ತಿ ಹುರಿಯಲಾರಂಭಿಸಿತು. ಬೆಂಕಿಯಿಂದ ನಿರ್ಮಾಣವಾದ ಹೊಗೆಯು ಪಕ್ಕದ ಮಯೂರ ಬೇಕರಿಗೆ ಹಾಗೂ ರಸ್ತೆಗೆ ಆವರಿಸಿತು. ನೋಡ ನೋಡುತ್ತಲೆ ಬೆಂಕಿಯ ಕೆನ್ನಾಲಿಗೆ 108 ಅಡಿ ಉದ್ದವಿರುವ ಸಾಕಮ್ಮಸ್ ಅಂಗಡಿಯನ್ನು ಆವರಿಸಿತು.
ಬೆಂಕಿಯ ತೀವ್ರತೆ ಕಂಡು ಅಕ್ಕಪಕ್ಕವಿದ್ದ ಅಂಗಡಿ- ಮುಂಗಟ್ಟುಗಳ ಬಾಗಿಲು ಬಂದ್ ಮಾಡಲಾಯಿತು. ಪಟ್ಟಣ ಪೊಲೀಸರು ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನೋಡಲು ಬಂದ ಜನರನ್ನು ಲಾಠಿ ಬೀಸಿ ಚದುರಿಸಿದರು. ಅಂಗಡಿ ಪಕ್ಕದಲ್ಲಿ ಪಾರ್ಕಿಂಗ್ ಮಾಡಿದ್ದ ಕಾರು, ಬೈಕ್ ಗಳನ್ನು ತೆರವುಗೊಳಿಸಿದರು. ಅಷ್ಟರಾಗಲೇ ಮಾಹಿತಿ ತಿಳಿದ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಅಂಗಡಿ ಬಾಗಿಲು ಹೊಡೆದು ಬೆಂಕಿ ನಂದಿಸಲು ಹರಸಾಹಸ ಪಟ್ಟರು. 1 ಗಂಟೆಗೂ ಹೆಚ್ಚು ಕಾಲ ಬೆಂಕಿ ನಂದಿಸುವ ಕಾರ್ಯಾಚರಣೆ ಮಾಡಿದರು.
ಇನ್ನು ಹೊಸ ವರ್ಷ ಆಚರಣೆಗೆ ಮಯೂರ ಬೇಕರಿಯಲ್ಲಿ ಸಿದ್ದಪಡಿಸಿದ್ದ ಸಿಹಿ ತಿಂಡಿಗಳು ಹಾಗೂ ಕೇಕ್ ಹೊಗೆ ಘಾಟಿಗೆ ನಾಶವಾಯಿತು. ಸಾಕಮ್ಮಸ್ ಅಂಗಡಿಯಲ್ಲಿದ್ದ ಲಕ್ಷಾಂತರ ರೂ. ಬೆಲೆಬಾಳುವ ವಸ್ತುಗಳು ಹಾನಿಗೊಳಗಾಯಿತು. ಅದೃಷ್ಟವಶಾತ್ ಅಗ್ನಿ ಅವಘಡ ಸಂಭವಿಸಿದ ಸಾಕಮ್ಮಸ್ ಅಂಗಡಿ 50 ಮೀಟರ್ ನಲ್ಲಿಯೇ ಪೆಟ್ರೋಲ್ ಬಂಕ್ ಇದ್ದು ಯಾವುದೇ ತೊಂದರೆ ಆಗಲಿಲ್ಲ.





