Mysore
28
few clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ಗುಲಾಮಗಿರಿಯ ಮನಸ್ಥಿತಿ ಕಿತ್ತೊಗೆಯಲು ಗುಣಮಟ್ಟದ ಶಿಕ್ಷಣ ದೊರೆಯಬೇಕು: ಸಿಎಂ ಸಿದ್ದರಾಮಯ್ಯ

ಚಾಮರಾಜನಗರ: ಜಾತಿ ವ್ಯವಸ್ಥೆಯ ಪರಿಣಾಮವಾಗಿ ಅನೇಕರಲ್ಲಿ ಈಗಲೂ ಗುಲಾಮಗಿರಿಯ ಮನಸ್ಥಿತಿ ಇದೆ. ಇದನ್ನು ಕಿತ್ತೊಗೆಯಲು ಗುಣಮಟ್ಟದ ಶಿಕ್ಷಣ ದೊರೆಯಬೇಕು ಎಂದು ಸಿಎಂ ಸಿದ್ದರಾಮಯ್ಯ ಕರೆ ನೀಡಿದರು.

ಇಂದು ಕೊಳ್ಳೇಗಾಲ ಸಂಘ ಸಂಸ್ಥೆಗಳು, ಭಕ್ತವೃಂದ ಹಾಗೂ ಜೆ.ಎಸ್.ಎಸ್ ಸಂಸ್ಥೆಯ ವತಿಯಿಂದ ಆಯೋಜಿಸಿದ್ದ ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠದ ಜಗದ್ಗುರು ಡಾ. ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳ 109ನೇ ಜಯಂತ್ಯೋತ್ಸವದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.

ಸಮಾಜದಲ್ಲಿ ಬದಲಾವಣೆ ತರಲು, ಮುಖ್ಯವಾಹಿನಿಗೆ ಬರಲು ಶಿಕ್ಷಣದಿಂದ ಮಾತ್ರ ಸಾಧ್ಯ. ಶಿಕ್ಷಣ ಇಲ್ಲದೇ ಹೋದರೆ ಸ್ವಾಭಿಮಾನಿಗಳಾಗಿ ಇರಲು ಸಾಧ್ಯವಾಗುವುದಿಲ್ಲ. ಗುಲಾಮಗಿರಿ ಮನಸ್ಥಿತಿಯನ್ನು ಕಿತ್ತೊಗೆಯಬೇಕು. ಇದು ವೈಜ್ಞಾನಿಕ ಶಿಕ್ಷಣದಿಂದ ಸಾಧ್ಯ ಎಂದರು.‌

ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳು ಒಬ್ಬ ಶ್ರೇಷ್ಠ ಸಂತರು. ಇಡೀ ಸಮಾಜಕ್ಕೆ ಮಾನವೀಯತೆಯ ಸಂದೇಶವನ್ನು ಸಾರಿದ್ದರು. ಆ ಕಾಲದಲ್ಲಿಯೇ ರಾಜೇಂದ್ರ ಮಹಾಸ್ವಾಮಿಗಳು ಗ್ರಾಮೀಣ ಮಕ್ಕಳಿಗೆ ಶಿಕ್ಷಣ, ವಸತಿ ನಿಲಯ ನಿರ್ಮಿಸಿದ್ದರಿಂದ ಇಂದು ಸುತ್ತೂರು ಮಹಾಸಂಸ್ಥಾನ ಹೆಮ್ಮರವಾಗಿ ಬೆಳೆಯಲು ಸಾಧ್ಯವಾಗಿದೆ. ಅವರ ಕಾಲದಲ್ಲಿ ಸಣ್ಣ ಝರಿಯಾಗಿದ್ದ ಸಂಸ್ಥೆ ಇಂದು ದೊಡ್ಡ ಸಮುದ್ರವಾಗಿದೆ. ಬಸವಣ್ಣನವರ ಸಂದೇಶವನ್ನು ರಾಜೇಂದ್ರ ಮಹಾಸ್ವಾಮಿಗಳು ಬಹಳ ವ್ಯಾಪಕವಾಗಿ ದೇಶ, ವಿದೇಶಗಳಲ್ಲಿಯೂ ಪಸರಿಸಿದ್ದಾರೆ ಎಂದರು.

 

Tags: