ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು
ಹನೂರು: ತಾಲ್ಲೂಕಿನ ಮಣಗಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭೈರನತ್ತ ಗ್ರಾಮದಲ್ಲಿ ಕಳೆದ ಒಂದು ತಿಂಗಳಿನಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು, ಪ್ರತಿನಿತ್ಯ ತೊಂದರೆ ಆಗುತ್ತಿದೆ. ಆದಷ್ಟು ಬೇಗ ಸಮಸ್ಯೆಯನ್ನು ಬಗೆಹರಿಸದಿದ್ದರೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ಹನೂರು ತಾಲ್ಲೂಕಿನ ಮಣಗಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭೈರನತ್ತ ಗ್ರಾಮದ ಒಂದನೇ ವಾರ್ಡಿನ ಪರಿಶಿಷ್ಟ ಜಾತಿ ಜನಾಂಗದ ಬಡಾವಣೆಯಲ್ಲಿ 200ಕ್ಕೂ ಹೆಚ್ಚು ಕುಟುಂಬಗಳಿದ್ದು, ಕಳೆದ ಒಂದು ತಿಂಗಳಿನಿಂದ ಕುಡಿಯುವ ನೀರಿನ ಸಮಸ್ಯೆ ಇರುವುದರಿಂದ ಪ್ರತಿನಿತ್ಯ ತೊಂದರೆ ಆಗುತ್ತಿದೆ. ಇದಲ್ಲದೆ ಸಮರ್ಪಕ ನೀರಿನಲ್ಲಿ ವ್ಯವಸ್ಥೆ ಇಲ್ಲದೆ ಶೌಚಾಲಯ ಬಟ್ಟೆ ತೊಳೆಯಲು ಸ್ನಾನ ಮಾಡಲು ಆಗದೆ ಪ್ರತಿನಿತ್ಯ ಪರಿತಪಿಸುತ್ತಿದ್ದೇವೆ. ಈ ಬಗ್ಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
ಗ್ರಾಮದ ಮುಖಂಡ ಮಾದೇಶ್ ಮಾತನಾಡಿ ನಮ್ಮ ವಾರ್ಡಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವ ಬಗ್ಗೆ ಶಾಸಕರು ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಈಗಾಗಲೇ ಬೋರ್ವೆಲ್ ಕೊರೆಸಲು ಪಾಯಿಂಟ್ ಸಹ ಗುರುತು ಮಾಡಲಾಗಿದೆ. ಆದರೆ ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ವಿಭಾಗದ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಇದುವರೆಗೂ ಕೊಳವೆ ಬಾವಿ ಕೊರೆಸಿಲ್ಲ. ಇದರಿಂದ ಪ್ರತಿನಿತ್ಯ ಕುಡಿಯುವ ನೀರಿಗೆ ತೊಂದರೆಯಾಗುತ್ತಿದೆ. ಈ ಕೂಡಲೇ ಸಮಸ್ಯೆಯನ್ನು ಬಗೆಹರಿಸಬೇಕು. ಇಲ್ಲದಿದ್ದರೆ ಗ್ರಾಮ ಪಂಚಾಯಿತಿ ಕಚೇರಿ ಮುಂಭಾಗ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಕುಡಿಯಲು ಹಾಗೂ ದಿನನಿತ್ಯದ ಬಳಕೆಗೆ ಸಮರ್ಪಕ ಕುಡಿಯುವ ನೀರು ಪೂರೈಕೆ ಆಗದಿರುವುದರಿಂದ ಮಹಿಳೆಯರು ಪ್ರತಿನಿತ್ಯ ಜಗಳ ಮಾಡುವುದು ಸಾಮಾನ್ಯವಾಗಿದೆ. ಇನ್ನು ಮುಂದಾದರು ಸಂಬಂಧಪಟ್ಟ ಅಧಿಕಾರಿಗಳು ಗ್ರಾಮಕ್ಕೆ ಸಮರ್ಪಕ ಕುಡಿಯುವ ನೀರಿನ ಪೂರೈಕೆ ಮಾಡುವಂತೆ ಪ್ರಜ್ಞಾವಂತ ನಾಗರಿಕರು ಮನವಿ ಮಾಡಿದ್ದಾರೆ.





