ಚಾಮರಾಜನಗರ: ವರದಕ್ಷಿಣೆ ತರದ ಹೆಂಡತಿಗೆ ಕಿರುಕುಳ ನೀಡಿ ಕೊಲೆ ಮಾಡಿದ್ದ ಅಪರಾಧಿಗೆ ಕೊಳ್ಳೇಗಾಲ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಬೆಳಗಾವಿ ಜಿಲ್ಲೆ ಅಥಣಿ ತಾಲ್ಲೂಕಿನ ತೀರ್ಥ ಗ್ರಾಮದ ಆನಂದ್ ಎಂಬಾತನೇ ಜೀವಾವಧಿ ಶಿಕ್ಷೆಗೆ ಗುರಿಯಾದ ಆರೋಪಿಯಾಗಿದ್ದಾನೆ. ಈತ ಹನೂರು ತಾಲ್ಲೂಕು ಪಂಚಾಯಿತಿಯಲ್ಲಿ ಪಿಡಿಓ ಆಗಿ ಕೆಲಸ ಮಾಡುತ್ತಿದ್ದ.
ಆರೋಪಿ ಆನಂದ್, ಜಮಖಂಡಿ ತಾಲ್ಲೂಕಿನ ಆಲಬಾಳು ಗ್ರಾಮದ ವಿದ್ಯಾಶ್ರೀ ಎಂಬುವವರನ್ನು 2019ರಲ್ಲಿ ವಿವಾಹವಾಗಿದ್ದ. ಬಳಿಕ ಕೊಳ್ಳೇಗಾಲ ಟೌನ್‌ನ ಬಸ್ತಿಪುರ ಬಡಾವಣೆಯಲ್ಲಿ ಬಾಡಿಗೆ ಮನೆಯಲ್ಲಿ ಪತ್ನಿ ವಿದ್ಯಾಶ್ರೀ ಹಾಗೂ 7 ತಿಂಗಳ ಮಗುವಿನೊಂದಿಗೆ ವಾಸವಿದ್ದ.
ದಿನ ಕಳೆದಂತೆ ಪತ್ನಿಯ ಜೊತೆ ರಂಪಾಟ ಶುರು ಮಾಡಿದ್ದ ಆನಂದ್, ತವರು ಮನೆಯಿಂದ 2 ಲಕ್ಷ ರೂಪಾಯಿ ವರದಕ್ಷಿಣೆ ತರುವಂತೆ ಪದೇ ಪದೇ ಕಾಟ ಕೊಡುತ್ತಿದ್ದ. ಬಳಿಕ 2022ರ ಮಾರ್ಚ್ 14ರಂದು ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿ, ನೇತು ಹಾಕಿದ್ದ.
ಈ ಬಗ್ಗೆ ಕೊಳ್ಳೇಗಾಲ ಟೌನ್ ಠಾಣೆ ಪೊಲೀಸರು ದೋಷಾರೋಪಣ ಪತ್ರ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆದು ಆನಂದ್ ಶ್ಯಾಮ್ ಕಾಂಬಳೆಯನ್ನು ದೋಷಿ ಎಂದು ಪರಿಗಣಿಸಿ ಕೋರ್ಟ್ ತೀರ್ಪು ನೀಡಿದೆ.