Mysore
19
clear sky

Social Media

ಶುಕ್ರವಾರ, 06 ಫೆಬ್ರವರಿ 2026
Light
Dark

ಹನೂರು ತಾಲ್ಲೂಕು ವ್ಯಾಪ್ತಿಯಲ್ಲಿ ಮುಂದುವರಿದ ಹಸುಗಳ ಮರಣ ಮೃದಂಗ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು 

ಹನೂರು: ತಾಲ್ಲೂಕು ವ್ಯಾಪ್ತಿಯಲ್ಲಿ ಹಸುಗಳ ಮರಣ ಮೃದಂಗ ಮುಂದುವರೆದಿದ್ದು ಸಂಬಂಧಪಟ್ಟ ಪಶುಸಂಗೋಪನಾ ಇಲಾಖೆಯ ಹಿರಿಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ಒದಗಿಸುವಂತೆ ಪ್ರಜ್ಞಾವಂತ ನಾಗರಿಕರು ಆಗ್ರಹಿಸಿದ್ದಾರೆ.

ಹನೂರು ತಾಲ್ಲೂಕಿನ ರಾಮಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಮರದೊಡ್ಡಿ ಗ್ರಾಮದ ತಂಗವೇಲು ಎಂಬುವವರಿಗೆ ಸೇರಿದ ಐದು ಹಸುಗಳನ್ನು ಅರಣ್ಯದಲ್ಲಿ ಮಧ್ಯಾಹ್ನ 12 ಗಂಟೆಯ ವೇಳೆ ಮೇವು ಮೇಯಲು ಬಿಡಲಾಗಿತ್ತು. ಸ್ವಲ್ಪ ಸಮಯ ಮೇವು ಮೇಯ್ದ ನಂತರ ಸಮೀಪದ ಕಂದಾಯ ಜಮೀನಿನಲ್ಲಿ ಹಸುಗಳು ನರಳಾಡುತ್ತಿದ್ದವು. ಇದನ್ನು ಗಮನಿಸಿದ ಸ್ಥಳೀಯರು ನೀರು ಕೊಡಿಸಿ ಸಮಾಧಾನ ಪಡಿಸಲು ಪ್ರಯತ್ನಿಸಿದ್ದಾರೆ. ಆದರೆ ಕೆಲವೇ ಕೆಲವು ನಿಮಿಷಗಳಲ್ಲಿ ಐದು ಹಸುಗಳು ಮೃತಪಟ್ಟಿವೆ. ಹಸುಗಳ ಸಾವಿಗೆ ಕಾರಣ ಏನೆಂಬುದನ್ನು ಹಿರಿಯ ತಜ್ಞ ವೈದ್ಯಾಧಿಕಾರಿಗಳು ಪತ್ತೆ ಹಚ್ಚಿ ಮತ್ತಷ್ಟು ಹಸುಗಳ ಮರಣ ಮೃದಂಗವನ್ನು ತಡೆಯಲು ಕ್ರಮವಹಿಸಬೇಕಿದೆ.

ಬುಧವಾರ ಹನೂರು ತಾಲೂಕಿನ ಶೆಟ್ಟಳ್ಳಿ ಗ್ರಾಮದ ಪರಶಿವಮೂರ್ತಿ ಎಂಬವರಿಗೆ ಸೇರಿದ ಆರು ಹಸುಗಳು ಬುಧವಾರ ಬೆಳಗ್ಗೆ ಜಮೀನಿನಲ್ಲಿ ಮೇವು ಮೇಯಲು ತೆರಳಿದ್ದ ವೇಳೆ ಅನುಮಾನಸ್ಪದವಾಗಿ ಮೃತಪಟ್ಟಿದ್ದ ಘಟನೆ ಮಾಸುವ ಮುನ್ನವೇ ಮತ್ತೊಂದು ಘಟನೆ ನಡೆದಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ.

ಬುಧವಾರವು 6 ಹಸುಗಳು ಅನುಮಾನಸ್ಪದವಾಗಿ ಮೃತಪಟ್ಟಿದ್ದವು. ಈ ವೇಳೆ ಹಸುವಿನ ಮಾಲೀಕ ಪರಶಿವಮೂರ್ತಿ ಅವರು ನಮ್ಮ ಹಸುಗಳಿಗೆ ಯಾರೋ ಕಿಡಿಗೇಡಿಗಳು ವಿಷ ಪ್ರಾಶನ ಮಾಡಿದ್ದಾರೆ ಎಂದು ಆರೋಪಿಸಿದ್ದರು.

ಘಟನಾ ಸ್ಥಳಕ್ಕೆ ಹನೂರು ತಾಲೂಕು ತಹಶೀಲ್ದಾರ್ ಚೈತ್ರ ಹಾಗೂ ಪಶುವೈದ್ಯಾಧಿಕಾರಿ ಡಾ.ಸಿದ್ದರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ನಂತರ ಡಾ.ಸಿದ್ದರಾಜುರವರು ಮೃತಪಟ್ಟಿದ್ದ ಆರು ಹಸುಗಳ ಮರಣೋತ್ತರ ಪರೀಕ್ಷೆ ನಡೆಸಿ ಹಸುಗಳ ಅಂಗಾಂಗಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿತ್ತು. ಮೇಲ್ನೋಟಕ್ಕೆ ವಿಷಪೂರಿತ ಆಹಾರ ನೀರು ಸೇವನೆಯಿಂದ ಮೃತಪಟ್ಟಿರಬಹುದು ಎಂದು ಶಂಕಿಸಿದ್ದರು.

ಇದೀಗ ಮತ್ತೆ 5 ಹಸುಗಳು ಮೃತಪಟ್ಟಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಸಂಬಂಧಪಟ್ಟ ಪಶುಸಂಗೋಪನ ಇಲಾಖೆ ಅಧಿಕಾರಿಗಳು ವಿಷಪೂರಿತ ಆಹಾರ ಸೇವನೆಯಿಂದ ಮೃತಪಟ್ಟಿದೆಯೇ ಎಂಬುದನ್ನು ದೃಢಪಡಿಸಬೇಕು ಅಥವಾ ಯಾರೋ ಕಿಡಿಗೇಡಿಗಳು ಮಾಡಿದ್ದರೆ ಪೊಲೀಸರು ಅವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಪ್ರಜ್ಞಾವಂತ ನಾಗರಿಕರು ಮನವಿ ಮಾಡಿದ್ದಾರೆ.

ಶೆಟ್ಟಳ್ಳಿಯಲ್ಲಿ 6 ಹಸುಗಳು ಮೃತಪಟ್ಟಿದ್ದರಿಂದ ಘಟನೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿತ್ತು. ಇಂದು ಕೂಡ ರಾಮಾಪುರ ವ್ಯಾಪ್ತಿಯ ಮಾಮರ ದೊಡ್ಡಿಯಲ್ಲಿ ಐದು ಹಸುಗಳು ಮೃತಪಟ್ಟಿರುವ ವಿಚಾರ ತಿಳಿಯುತ್ತಿದ್ದಂತೆ ಕಂದಾಯ ನಿರೀಕ್ಷಕರನ್ನು ಸ್ಥಳಕ್ಕೆ ಕಳುಹಿಸಿಕೊಡಲಾಗಿದೆ. ಈಗಾಗಲೇ ಪಶು ವೈದ್ಯಾಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದು ಹಸುಗಳ ಸಾವಿಗೆ ನಿಖರ ಮಾಹಿತಿ ಕಲೆ ಹಾಕುವಂತೆ ಸೂಚನೆ ನೀಡಲಾಗಿದೆ. ಪ್ರಯೋಗಾಲಯದಿಂದ ವರದಿ ಬಂದ ನಂತರ ನಿಖರ ಮಾಹಿತಿ ತಿಳಿಯಲಿದೆ ಎಂದು ತಹಶೀಲ್ದಾರ್‌ ಚೈತ್ರಾ ಹೇಳಿದ್ದಾರೆ.

 

 

 

Tags:
error: Content is protected !!