Mysore
19
clear sky

Social Media

ಸೋಮವಾರ, 09 ಮಾರ್ಚ್ 2026
Light
Dark

ಉಡುತೊರೆ ಹಳ್ಳ ಜಲಾಶಯ ಕಾಮಗಾರಿಗೆ ಸಿಎಂ ಅನುಮೋದನೆ: ಮಲೆ ಮಹದೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ ಶಾಸಕ ಎಂ.ಆರ್.ಮಂಜುನಾಥ್‌

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು

ಹನೂರು: ತಾಲ್ಲೂಕಿನ ಉಡುತೊರೆ ಹಳ್ಳ ಜಲಾಶಯ ಏತ ನೀರಾವರಿ ಯೋಜನೆ ಹಾಗೂ ಕೆರೆಕಟ್ಟೆಗಳಿಗೆ ಕಾವೇರಿ ನದಿ ಮೂಲದಿಂದ ನೀರು ತುಂಬಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ನಲ್ಲಿ 490 ಕೋಟಿ ವೆಚ್ಚದ ಯೋಜನೆಗೆ ಅನುಮೋದನೆ ನೀಡಿದ ಹಿನ್ನೆಲೆಯಲ್ಲಿ ಶಾಸಕ ಎಂಆರ್ ಮಂಜುನಾಥ್ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಭಾನುವಾರ ಶ್ರೀಕ್ಷೇತ್ರ ಮಲೆ ಮಾದೇಶ್ವರ ಬೆಟ್ಟಕ್ಕೆ ಭೇಟಿ ನೀಡಿದ ಶಾಸಕ ಮಂಜುನಾಥ್ ಅವರನ್ನು ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರದ ಉಪ ಕಾರ್ಯದರ್ಶಿ ಚಂದ್ರಶೇಖರ್ ಬರಮಾಡಿಕೊಂಡರು.

ಇದೆ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಕೆ ವೆಂಕಟೇಶ್, ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್ ಸಿ ಮಹದೇವಪ್ಪ, ಸಂಸದ ಸುನೀಲ್ ಬೋಸ್ ಹಾಗೂ ರೈತರ ಹೆಸರಿನಲ್ಲಿ ವಿಶೇಷ ಅರ್ಚನೆ ಮಾಡಿಸಿ ಪೂಜೆ ಸಲ್ಲಿಸಿದರು.

ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹನೂರು ತಾಲೂಕಿನ ರಾಮಪುರ ಹೋಬಳಿ ವ್ಯಾಪ್ತಿಯ ರೈತರು ಹಲವಾರು ವರ್ಷಗಳಿಂದ ಸಮರ್ಪಕ ಮಳೆಯಾಗದೇ ಅಂತರ್ಜಲ ಮಟ್ಟ ಕುಸಿದು ಇನ್ನಿಲ್ಲದ ತೊಂದರೆ ಅನುಭವಿಸುತ್ತಿದ್ದರು. ಈ ಭಾಗದ ಜನರಿಗೆ ಶಾಶ್ವತ ನೀರಾವರಿ ಯೋಜನೆ ಕಲ್ಪಿಸಲು ಕಳೆದ ಮೂರು ವರ್ಷಗಳಿಂದ ಸತತ ಪ್ರಯತ್ನ ಮಾಡಲಾಗಿತ್ತು.

ಪವಾಡ ಪುರುಷ ಮಲೆ ಮಹದೇಶ್ವರನ ಆಶೀರ್ವಾದದಿಂದ ಈ ಬಾರಿಯ ಬಜೆಟ್ ನಲ್ಲಿ ಸಿಎಂ ಸಿದ್ದರಾಮಯ್ಯರವರು 490 ಕೋಟಿ ವೆಚ್ಚದ ಯೋಜನೆಗೆ ಅನುಮೋದನೆ ನೀಡಿದ್ದಾರೆ.

ಅತಿ ಶೀಘ್ರದಲ್ಲಿಯೇ ಮುಖ್ಯಮಂತ್ರಿಗಳಿಗೆ ಮನವಿ ಮಾಡಿ ಶೀಘ್ರದಲ್ಲೇ ಅನುದಾನ ಬಿಡುಗಡೆಗೊಳಿಸಿ ಕಾಮಗಾರಿಯನ್ನು ಪ್ರಾರಂಭಿಸಲು ಸೂಕ್ತ ಕ್ರಮ ವಹಿಸಲಾಗುವುದು. ಈ ಯೋಜನೆ ಪೂರ್ಣಗೊಂಡರೆ, ರಾಮಾಪುರ ಹೋಬಳಿ ವ್ಯಾಪ್ತಿಗೆ ಶಾಶ್ವತ ನೀರಾವರಿ ಯೋಜನೆ ಸಿಗಲಿದೆ. ಇದರಿಂದ ರೈತರು ಆರ್ಥಿಕವಾಗಿ ಸದೃಢರಾಗಬಹುದು ಇದಲ್ಲದೆ ವ್ಯಾಪಾರ ವಹಿವಾಟು ಸಹ ವೃದ್ಧಿಯಾಗಲಿದೆ ಎಂದರು.

ಇದೇ ವೇಳೆ ಪ್ರಾಧಿಕಾರದ ಉಪಕಾರ್ಯದರ್ಶಿ ಚಂದ್ರಶೇಖರ್, ಲೋಕೋಪಯೋಗಿ ಇಲಾಖೆಯ ಎಇಇ ಚಿನ್ನಣ್ಣ, ಮುಖಂಡರುಗಳಾದ ಡಿ. ಆರ್ ಮಾದೇಶ್, ಡಿ ಕೆ ರಾಜು, ಗುರುಸ್ವಾಮಿ, ನಾಗರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.

Tags:
error: Content is protected !!