Mysore
23
clear sky

Social Media

ಬುಧವಾರ, 11 ಮಾರ್ಚ್ 2026
Light
Dark

ಉಡುತೊರೆ ಹಳ್ಳ ಜಲಾಶಯ ಕಾಮಗಾರಿಗೆ ಸಿಎಂ ಅನುಮೋದನೆ: ರೈತಾಪಿ ವರ್ಗದವರಿಗೆ ಐತಿಹಾಸಿಕ ದಿನ ಎಂದ ಶಾಸಕ ಎಂ.ಆರ್.ಮಂಜುನಾಥ್‌

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು

ಹನೂರು: ತಾಲ್ಲೂಕಿನ ರಾಮಾಪುರ ಹೋಬಳಿ ವ್ಯಾಪ್ತಿಗೆ ಶಾಶ್ವತ ನೀರಾವರಿ ಕಲ್ಪಿಸುವಂತೆ ಮುಖ್ಯಮಂತ್ರಿಗಳಿಗೆ ಹಲವು ಬಾರಿ ಮಾಡಲಾಗಿದ್ದ ಮನವಿಗೆ ಸ್ಪಂದಿಸಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರು 490 ಕೋಟಿ ವೆಚ್ಚದ ಯೋಜನೆಗೆ ಬಜೆಟ್ ನಲ್ಲಿ ಅನುಮೋದನೆ ನೀಡಿರುವುದು ಹನೂರು ವಿಧಾನಸಭಾ ಕ್ಷೇತ್ರದ ರೈತಾಪಿ ವರ್ಗದವರಿಗೆ ಐತಿಹಾಸಿಕ ದಿನವಾಗಿದೆ ಎಂದು ಶಾಸಕ ಎಂ ಆರ್ ಮಂಜುನಾಥ್ ತಿಳಿಸಿದರು.

ತಾಲ್ಲೂಕಿನ ರಾಮಪುರ ಹೋಬಳಿ ವ್ಯಾಪ್ತಿಗೆ ನೀರಾವರಿ ವ್ಯವಸ್ಥೆ ಕಲ್ಪಿಸಲು ಬಜೆಟ್ ನಲ್ಲಿ 490 ಕೋಟಿ ವೆಚ್ಚದ ಯೋಜನಾ ಕಾಮಗಾರಿಗೆ ಅನುಮೋದನೆಯಾದ ನಂತರ ಕ್ಷೇತ್ರಕ್ಕೆ ಆಗಮಿಸಿ ಕಾರ್ಯಕರ್ತರ ಜೊತೆಗೂಡಿ ಸಂಭ್ರಮಾಚರಣೆ ಮಾಡಿ ನಂತರ ಅವರು ಮಾತನಾಡಿದರು.

ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಳೆದ ಹಲವಾರು ವರ್ಷಗಳಿಂದ ಸಮರ್ಪಕ ಮಳೆಯಾಗದೆ ಅಂತರ್ಜಲ ಮಟ್ಟ ಕುಸಿದು ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿತ್ತು. ರಾಮಾಪುರ ಹೋಬಳಿ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳಲ್ಲಿ ಬೇಸಿಗೆ ಮುನ್ನವೇ ಕುಡಿಯುವ ನೀರು ಸಮಸ್ಯೆ ಉಂಟಾಗುತ್ತಿತ್ತು.

ಈ ಹೋಬಳಿ ವ್ಯಾಪ್ತಿಯ ರೈತರಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಶಾಶ್ವತ ನೀರಾವರಿ ಯೋಜನೆ ಕಲ್ಪಿಸಲು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರಿಗೆ ಹಲವು ಬಾರಿ ಮನವಿ ಮಾಡಲಾಗಿತ್ತು. ನಮ್ಮ ಮನವಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ ವೆಂಕಟೇಶ್ ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಮಹದೇವಪ್ಪ ಸಂಸದ ಸುನಿಲ್ ಬೋಸ್ ರವರು ಸಹ ಸಾಥ್ ನೀಡಿದ್ದರು. ಇದಲ್ಲದೆ ಕೊನೆಯ ಕ್ಷಣದಲ್ಲಿ ರೈತರು ಸಹ ಪಾದಯಾತ್ರೆ ಮಾಡುವ ಮೂಲಕ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಿದ್ದರು. ಪ್ರಾರಂಭದಲ್ಲಿ 330 ಕೋಟಿಗೆ ಡಿಪಿಆರ್ ಸಿದ್ದಪಡಿಸಲಾಗಿತ್ತು. ತದನಂತರ 490 ಕೋಟಿ ವೆಚ್ಚದಲ್ಲಿ ಡಿಪಿಆರ್ ಸಿದ್ದಪಡಿಸಲಾಯಿತು. ಎಲ್ಲರ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಬಜೆಟ್ ನಲ್ಲಿ 490 ಕೋಟಿ ವೆಚ್ಚದ ಯೋಜನೆಗೆ ಅನುಮೋದನೆಗೊಳಿಸಿದ್ದಾರೆ.

ಮುಂದಿನ ದಿನಗಳಲ್ಲಿ ನೀರಾವರಿ ಇಲಾಖೆಯ ಹಿರಿಯ ಅಧಿಕಾರಿಗಳ ಸಹಕಾರದೊಂದಿಗೆ ಪಿ ಯೋಜನೆಯನ್ನು ಪೂರ್ಣಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಈ ಯೋಜನೆಯನ್ನು ಕ್ಷೇತ್ರದ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಹಗಲಿರುಳು ಶ್ರಮ ವಹಿಸುವುದಾಗಿ ತಿಳಿಸಿದರು.

ರಾಮನಗುಡ್ಡ ಜಲಾಶಯಕ್ಕೆ ಕಾವೇರಿ ನದಿ ಮೂಲದಿಂದ ನೀರು ತುಂಬಿಸಿದ ನಂತರ ಬಾಗಿನ ಅರ್ಪಿಸುವ ಕಾರ್ಯಕ್ರಮಕ್ಕೆ ಆಗಮಿಸಿದ್ದ ಕಾವೇರಿ ನೀರಾವರಿ ನಿಗಮದ ಹಿರಿಯ ಅಧಿಕಾರಿಗಳ ಜೊತೆ ಸುಧೀರ್ಘವಾಗಿ ಹಲವು ಗಂಟೆಗಳ ಕಾಲ ರಾಮಪುರ ಹೋಬಳಿ ವ್ಯಾಪ್ತಿಗೆ ಶಾಶ್ವತ ನೀರಾವರಿ ಯೋಜನೆ ಕಲ್ಪಿಸಲು ಚರ್ಚೆ ನಡೆಸಲಾಗಿತ್ತು. ಈ ಯೋಜನೆಯಿಂದ ರೈತರಿಗೆ ಹಾಗೂ ಸಾರ್ವಜನಿಕರಿಗೆ ಆಗುವ ಅನುಕೂಲದ ಬಗ್ಗೆ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರಿಗೆ ಎಳೆಎಳೆಯಾಗಿ ಮನವರಿಕೆ ಮಾಡಿಕೊಡಲಾಗಿತ್ತು. ಈ ಯೋಜನೆಯಿಂದ ಕ್ಷೇತ್ರದ ಜನರಿಗೆ ಹಾಗೂ ರೈತರಿಗೆ ಅನುಕೂಲವಾಗುವುದಾದರೆ ಈ ಯೋಜನೆಗೆ ಅನುಮೋದನೆ ನೀಡುವುದಾಗಿ ಭರವಸೆ ನೀಡಿದ್ದರು. ಕೊಟ್ಟ ಮಾತಿನಂತೆ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರು ಈ ಯೋಜನೆಯನ್ನು ಬಜೆಟ್ ನಲ್ಲಿ ಘೋಷಣೆ ಮಾಡಿದ್ದಾರೆ. ಅದರಂತೆ ಶೀಘ್ರದಲ್ಲಿಯೇ ಅನುದಾನ ಬಿಡುಗಡೆ ಮಾಡಿದ ತಕ್ಷಣವೇ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.

ಇನ್ನು ಪಟ್ಟಣದ ನಾಗಪ್ಪ ವೃತ್ತದಲ್ಲಿ ಶಾಸಕ ಎಂಆರ್ ಮಂಜುನಾಥ್ ರವರನ್ನು ಕಾರ್ಯಕರ್ತರು ಹೆಗಲ ಮೇಲೆ ಕೂರಿಸಿಕೊಂಡು ಜೈಕಾರ ಮೊಳಗಿಸಿ ಸಿದ್ದರಾಮಯ್ಯ ಹಾಗೂ ಸಚಿವರಿಗೆ ಜೈಕಾರ ಹಾಕಿದರು.

ಸುಮಾರು ಒಂದು ಗಂಟೆಗಳಿಗೂ ಹೆಚ್ಚು ಕಾಲ ಪಟಾಕಿ ಸಿಡಿಸುವ ಮೂಲಕ ಸಂಭ್ರಮಾಚರಣೆ ಮಾಡಿದರು.

ಇದೇ ವೇಳೆ ಚಾಮುಲ್ ನಿರ್ದೇಶಕರಾದ ಮಹದೇವ ಪ್ರಸಾದ್, ಮಡಿವಾಳ ಸಮಾಜದ ಜಿಲ್ಲಾ ಉಪಾಧ್ಯಕ್ಷ ವಿಜಯಕುಮಾರ್, ಮಾಜಿ ಅಧ್ಯಕ್ಷ ಗುರುಮಲ್ಲಪ್ಪ ಪಟ್ಟಣ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಆನಂದ್ ಕುಮಾರ್, ಮಾಜಿ ಸದಸ್ಯರಾದ ಮಹೇಶ್ ನಾಯ್ಕ, ಸಿದ್ದರಾಜು ಮುಖಂಡರಾದ ರಾಜಶೇಖರ್ ಮೂರ್ತಿ ಲಿಂಗೇಗೌಡ, ರಾಜುಗೌಡ, ಕೃಷ್ಣ ನಟರಾಜು, ವೆಂಕಟೇಶ್ ಗುರುಸ್ವಾಮಿ, ಮಹದೇವ, ಶ್ರೀನಿವಾಸ್, ಉದ್ನೂರು ಗಿರೀಶ್, ಪ್ರಮೋದ್, ಶಾಂತಣ್ಣ, ಪ್ರಸನ್ನ, ರವಿ ಚಿನ್ನವೆಂಕಟ ಸೇರಿದಂತೆ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

 

Tags:
error: Content is protected !!