ಕೊಳ್ಳೇಗಾಲ : ಸುಪ್ರಸಿದ್ಧ ಚಿಕ್ಕಲ್ಲೂರು ಸಿದ್ದಪ್ಪಾಜಿ ಜಾತ್ರೆಯಲ್ಲಿ ಮೊದಲನೇ ದಿನವಾದ ಶನಿವಾರ ತಡರಾತ್ರಿ ಚಂದ್ರ ಮಂಡಲೋತ್ಸವದ ಮೂಲಕ ವಿದ್ಯುಕ್ತ ಚಾಲನೆ ದೊರಕಿದೆ.
ಚಿಕ್ಕಲ್ಲೂರು ಸಿದ್ದಪ್ಪಾಜಿ ದೇವಸ್ಥಾನ ಮುಂದೆ ಇರುವ ಚಂದ್ರಮಂಡಲ ಕಟ್ಟೆಯ ಮೇಲೆ ಸಿದ್ಧವಾಗಿದ್ದ ಬಿದರಿನ ಸಿದ್ದಪ್ಪಾಜಿ ಚಂದ್ರಮಂಡಲಕ್ಕೆ ಬೊಪ್ಪೆಗೌಡನಪುರ ಮಠದ ಜ್ಞಾನನಂದರಾಜೇ ಅರಸ್ ಅಗ್ನಿ ಸ್ಪರ್ಶ ಮಾಡಿದರು.
ಇದಕ್ಕೂ ಮುನ್ನ ಹಳೇ ಮಠದಿಂದ ತಮಟೆ, ಡೊಳ್ಳು, ಜಾಗಟೆ, ಕೊಂಬು, ಕಹಳೆ ಶಬ್ದದೊಂದಿಗೆ ನಿಶಾನೆ, ಛತ್ರಿ, ಚಾಮರ, ಸತ್ತಿಗೆ, ಸೂರಪಾನಿ, ಚನ್ನಯ್ಯ ಲಿಂಗಯ್ಯ ಉರಿ ಕಂಡಾಯಗಳೊಡನೆ ಬಸವನನ್ನು ಮುಂದೆ ಬಿಟ್ಟುಕೊಂಡು ಬೊಪ್ಪೆಗೌಡನಪುರದ ಧರೆಗೆ ದೊಡ್ಡವರ ಸ್ವಾಮೀಜಿ ಶ್ರೀ ಜ್ಞಾನನಂದ ಚನ್ನರಾಜೇ ಅರಸ್ ಅವರು ಆಗಮಿಸಿ ಶ್ರೀ ಸಿದ್ದಪ್ಪಾಜಿ ಐಕ್ಯ ಗದ್ದುಗೆಗೆ ಪೂಜಾಕೈಕರ್ಯಗಳನ್ನು ನಡೆಸಿದರು.
ಚಿಕ್ಕಲ್ಲೂರು ಜಾತ್ರೆಯ ಚಂದ್ರಮಂಡಲ ಸುತ್ತಲೂ ಇರುವ ಗ್ರಾಮಸ್ಥರು ನೀಡಿದ ಹಚ್ಚೆ, ಬಿದಿರು, ಪಂಜು ಎಣ್ಣೆ ಇತರೆ ಸಾಮಗ್ರಿಗಳನ್ನು ಸೇರಿಸಿ ಘನನೀಲಿಯ ಗದ್ದುಗೆ ಚಂದ್ರಮಂಡಲ ಕಟ್ಟೆಯಲ್ಲಿ ಸಿದ್ದಪಡ್ಡಿಸಿದ್ದ ಸಿದ್ದಪ್ಪಾಜಿ ಚಂದ್ರಮಂಡಲದಲ್ಲಿ ಸುತ್ತ ಮೂರು ಪ್ರದಕ್ಷಣೆಗಳನ್ನು ಹಾಕಿದ ಸ್ವಾಮಿಗಳು ನಂತರ ವೀಶೆಷ ಪೂಜೆ ಸಲ್ಲಿಸಿದರು.
ಐದು ದಿನಗಳ ಜಾತ್ರೆ
ಜ.೩ರ ಶನಿವಾರ ಚಂದ್ರಮಂಡಲೋತ್ಸವ, ಜ.೪ ಭಾನುವಾರ ಹುಲಿವಾಹನೋತ್ಸವ, ಜ.೫ರ ಸೋಮವಾರ ಮಂಟಪೋತ್ಸವ (ಮುಡಿಸೇವೆ), ಜ.೬ರ ಮಂಗಳವಾರ ಗಜವಾಹನೋತ್ಸವ (ಪಂಕ್ತಿಸೇವೆ), ಜ.೭ರ ಬುಧವಾರ ಮುತ್ತರಾಯನ ಸೇವೆ ನಡೆಯಲಿದೆ.





