Mysore
16
scattered clouds

Social Media

ಭಾನುವಾರ, 07 ಡಿಸೆಂಬರ್ 2025
Light
Dark

ಚಾಮರಾಜನಗರ| ಒಳ ಮೀಸಲಾತಿಗೆ ಒತ್ತಾಯಿಸಿ ಆದಿವಾಸಿಗಳ ಪ್ರತಿಭಟನೆ

ಚಾಮರಾಜನಗರ: ಅರಣ್ಯ ಪ್ರದೇಶದೊಳಗೆ ವಾಸವಿರುವ ಆದಿವಾಸಿಗಳಿಗೆ ಶೇ.3ರಷ್ಟು ಒಳ ಮೀಸಲಾತಿ ನೀಡುವಂತೆ ಆಗ್ರಹಿಸಿ ಜಿಲ್ಲೆಯ ಆದಿವಾಸಿ ಸಂಘಟನೆಗಳ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ನಗರದ ಲ್ಯಾಂಪ್ಸ್ ಭವನದ ಮುಂಭಾಗದಿಂದ ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘದ ನೇತೃತ್ವದಲ್ಲಿ ಮೆರವಣಿಗೆ ಹೊರಟ ಗಿರಿಜನರು, ಡೀವಿಯೇಷನ್ ರಸ್ತೆ, ಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿರಸ್ತೆ ಮೂಲಕ ಜಿಲ್ಲಾಡಳಿತ ಭವನಕ್ಕೆ ತೆರಳಿ ಪ್ರತಿಭಟನೆ ನಡೆಸಿದರು.

ಜಿಲ್ಲೆಯ ಹನೂರು, ಕೊಳ್ಳೇಗಾಲ, ಚಾಮರಾಜನಗರ, ಯಳಂದೂರು ಮತ್ತು ಗುಂಡ್ಲುಪೇಟೆ ತಾಲ್ಲೂಕುಗಳ ವ್ಯಾಪ್ತಿಯಲ್ಲಿರುವ ಬಿಳಿಗಿರಿರಂಗ ಬೆಟ್ಟ ಮತ್ತು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಗಳು, ಮಲೆ ಮಹದೇಶ್ವರ ಮತ್ತು ಕಾವೇರಿ ವನ್ಯಜೀವಿ ಧಾಮಗಳಲ್ಲಿ ೪೫ ಸಾವಿರ ಸೋಲಿಗರು, ಜೇನು ಕುರುಬರು ವಾಸವಾಗಿದ್ದಾರೆ ಎಂದು ಪ್ರತಿಭಟನಾಕಾರರು ತಿಳಿಸಿದರು.

1958ರಲ್ಲಿ ಎಸ್ಸಿ, ಎಸ್ಟಿ ಜನಸಂಖ್ಯೆ ಮತ್ತು ಅವು ಒಳಗೊಳ್ಳುವ ಜಾತಿಗಳ ಸಂಖ್ಯೆಯಂತೆ ಪರಿಶಿಷ್ಟ ಜಾತಿಗಳಿಗೆ ಶೇ.15 ಹಾಗೂ ಪರಿಶಿಷ್ಟ ಪಂಡಗಳಿಗೆ ಶೇ.3, ಹಿಂದುಳಿದ ವರ್ಗಗಳಿಗೆ ಶೇ.37ರಷ್ಟು ಮೀಸಲಾತಿ ನೀಡಲಾಗಿದೆ. ನಿವೃತ್ತ ನ್ಯಾ.ನಾಗಮೋಹನದಾಸ್ ಅವರು ಎಸ್ಸಿ, ಎಸ್ಟಿಗೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಬೇಕು. ಅದರಂತೆ ಎಸ್ಸಿಗೆ ಶೇ.15ರಿಂದ 17ಕ್ಕೆ, ಎಸ್ಟಿಗೆ ಶೇ.3ರಿಂದ ಶೇ.7ಕ್ಕೆ ಏರಿಸಬೇಕು ಎಂದು ವರದಿಯಲ್ಲಿ ಹೇಳಿದ್ದಾರೆ. ಮೀಸಲಾತಿಯಿಂದ ವಂಚಿತರಾಗಿರುವ ಆದಿವಾಸಿಗಳಿಗೆ ವಿಶೇಷವಾಗಿ ಮೀಸಲಾತಿ ನೀಡಬೇಕೆಂದು ಶಿಫಾರಸು ಮಾಡಿದ್ದಾರೆ. ಅದನ್ನು ಸರ್ಕಾರ ಪರಿಗಣಿಸಬೇಕು ಎಂದು ಆಗ್ರಹಿಸಿದರು.

ಒಳ ಮೀಸಲಾತಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಎಸ್ಸಿಗಳಿಗೆ ಒಳ ಮೀಸಲಾತಿ ನೀಡಲು ರಾಜ್ಯ ಸರ್ಕಾರಗಳಿಗೆ ಯಾವುದೇ ತಡೆ ಇಲ್ಲ ಎಂದು ತೀರ್ಪು ನೀಡಿದೆ. ಆದರೆ ಎಸ್ಟಿಗಳಿಗೆ ಒಳಮೀಸಲಾತಿ ನೀಡುವ ಕುರಿತು ಯಾವುದೇ ಆದೇಶ ನೀಡಿಲ್ಲ. ಇದರಿಂದ 12 ಅರಣ್ಯ ಅದಿವಾಸಿ ಸಮುದಾಯಗಳಿಗೆ ಅನ್ಯಾಯವಾಗುತ್ತದೆ. ಆದ್ದರಿಂದ ರಾಜ್ಯ ಸರ್ಕಾರ ಅರಣ್ಯ ಆದಿವಾಸಿಗಳಿಗೆ ಶೇ.3ರಷ್ಟು ಮೀಸಲಾತಿ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘದ ಕಾರ್ಯದರ್ಶಿ ಡಾ.ಸಿ.ಮಾದೇಗೌಡ, ಮುಖಂಡರಾದ ಮುತ್ತಯ್ಯ, ದಾಸೇಗೌಡ, ಕೇತಮ್ಮ, ಕೋಣೂರೇಗೌಡ, ಪುಟ್ಟಮ್ಮ, ಇತರರು ಭಾಗವಹಿಸಿದ್ದರು.

 

Tags:
error: Content is protected !!