ಚಾಮರಾಜನಗರ: ಕಳಪೆ ಗುಣಮಟ್ಟದ ಉಪ್ಪು ಇಡಲಾಗಿದ್ದ ಯಳಂದೂರು ಪಟ್ಟಣದ ಬಿ.ಆರ್. ಹಿಲ್ಸ್ ರಸ್ತೆಯಲ್ಲಿರುವ ಅಂಬೆ ಜನರಲ್ ಸ್ಟೋರ್ ಮಾಲೀಕರಿಗೆ 10 ಸಾವಿರ ರೂ.ದಂಡ ವಿಧಿಸಲಾಗಿದೆ.
ಅಂಬೆ ಜನರಲ್ ಸ್ಟೋರ್ ಮಾಲೀಕರಾದ ಮಹೇಂದ್ರ ಅವರ ಅಂಗಡಿಯಿಂದ ಆಗಸ್ಟ್ 2024ರ ಮಾಹೆಯಲ್ಲಿ ಸಂಶಯಾಸ್ಪದ ಆಶೀರ್ವಾದ್ ಐಯೋಡೈಸ್ಡ್ ಪುಡಿ ಉಪ್ಪಿನ ಮಾದರಿಯನ್ನು ಆಹಾರ ಸುರಕ್ಷತಾ ಅಧಿಕಾರಿ ಶ್ರೀನಿವಾಸ ಅವರು ಸಂಗ್ರಹಿಸಿ ವಿಶ್ಲೇಷಣೆಗಾಗಿ ಪ್ರಯೋಗ ಶಾಲೆಗೆ ಕಳುಹಿಸಿದ್ದರು. ವಿಶ್ಲೇಷಣಾ ವರದಿಯಲ್ಲಿ ಸದರಿ ಆಶೀರ್ವಾದ್ ಆಯೋಡಿನ್ ಯುಕ್ತ ಪುಡಿ ಉಪ್ಪು ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು ದೃಢಪಟ್ಟಿತ್ತು.
ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006 ನಿಯಮ ಹಾಗೂ ನಿಬಂಧನೆ-2011 ರಡಿಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿಗಳು ಹಾಗೂ ನ್ಯಾಯನಿರ್ಣಯಾಧಿಕಾರಿಗಳ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಾಗಿತ್ತು. ಮೊಕದ್ದಮೆಯನ್ನು ನಡೆಸಿದ ನ್ಯಾಯನಿರ್ಣಯಾಧಿಕಾರಿಗಳು ಈ ಪ್ರಕರಣಕ್ಕೆ ಸಂಬಂಧಿಸಿದಂತೆ 10000 ರೂ. ದಂಡ ವಿಧಿಸಿ ಡಿಸೆಂಬರ್ 2ರಲ್ಲಿ ತೀರ್ಪು ನೀಡಿದ್ದಾರೆ. ಅಂಬೆ ಜನರಲ್ ಸ್ಟೋರ್ ಮಾಲೀಕರಾದ ಮಹೇಂದ್ರ ದಂಡ ಪಾವತಿಸಿದ್ದಾರೆ.
ಸದರಿ ಬ್ಯಾಚ್‌ನ ಅಡುಗೆ ಉಪ್ಪನ್ನು ಯಾವುದೇ ಕಾರಣಕ್ಕೂ ಮಾರಾಟ, ಸಂಗ್ರಹಣೆ ಮಾಡದಂತೆ ಹಾಗೂ ಸಾರ್ವಜನಿಕರಿಗೆ ಯಾವುದೇ ರೂಪದಲ್ಲಿ ಮಾರಾಟ ಮಾಡದಂತೆ ಸಾರ್ವಜನಿಕ ಹಿತದೃಷ್ಠಿಯಿಂದ ನಿಷೇಧಿಸಿ ತೀರ್ಪು ನೀಡಿದ್ದಾರೆ ಎಂದು ಆಹಾರ ಸುರಕ್ಷತೆ ಮತ್ತು ಪ್ರಾಧಿಕಾರದ ಆಹಾರ ಸುರಕ್ಷತಾಧಿಕಾರಿ ಶ್ರೀನಿವಾಸ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





