ಚಾಮರಾಜನಗರ: ಆಷಾಢ ಮಾಸದಲ್ಲಿ ನಡೆಯುವ ರಾಜ್ಯದ ಏಕೈಕ ರಥೋತ್ಸವವಾದ ಚಾಮರಾಜನಗರದ ಚಾಮರಾಜೇಶ್ವರ ರಥೋತ್ಸವಕ್ಕೆ ಸಿದ್ಧತೆ ಆರಂಭಗೊಂಡಿದ್ದು, ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ರಥ ಕಟ್ಟುವ ಕಾರ್ಯಕ್ಕೆ ಚಾಲನೆ ಕೊಟ್ಟಿದ್ದಾರೆ.
ಆಷಾಢ ಮಾಸದಲ್ಲಿ ರಥೋತ್ಸವ ನಡೆಯುವುದು ಬಹಳ ಅಪರೂಪ ಮತ್ತು ವಿರಳ. ಆದರೆ ರಾಜ್ಯದ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಮಾತ್ರ ಆಷಾಢದ ಜಾತ್ರೆ ನಡೆಯಲಿದೆ. ಇದೇ ಜುಲೈ.20ರಂದು ರಥೋತ್ಸವ ನಡೆಯಲಿದ್ದು, ಸಾಂಪ್ರದಾಯಿಕವಾಗಿ ತಯಾರಿ ಆರಂಭಗೊಂಡಿದೆ.
ಚಾಮರಾಜೇಶ್ವರ ರಥೋತ್ಸವವು ನೂರಾರು ವರ್ಷಗಳಿಂದ ನಡೆದುಕೊಂಡು ಬರುತ್ತಿದ್ದು, ಇದು ದಂಪತಿಗಳ ಜಾತ್ರೆ ಅಂತಲೇ ಜನಪ್ರಿಯವಾಗಿದೆ. ಮದುವೆಯಾದ ಹೊಸತರಲ್ಲಿ ಪತ್ನಿ ತವರಿನಲ್ಲಿ ಇರುವುದರಿಂದ ಈ ಜಾತ್ರೆಯ ದಿನದಂದು ಪತಿ-ಪತ್ನಿ ಭೇಟಿಯಾಗಿ ಹಣ್ಣು ಜವನ ಎಸೆದು ಪ್ರಾರ್ಥನೆ ಸಲ್ಲಿಸುವುದು ಇಲ್ಲಿನ ವಿಶೇಷವಾಗಿದೆ.
ತೇರು ಕಟ್ಟುವ ಕಾರ್ಯದಲ್ಲಿ ನುರಿತರು ಪಾಲ್ಗೊಂಡಿದ್ದು, ಈ ಬಾರಿ ಮಳೆ ಉತ್ತಮವಾಗಿ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಅದ್ಧೂರಿಯಾಗಿ ಜಾತ್ರೆ ಮಾಡಲು ಭಕ್ತರು ಅಣಿಯಾಗುತ್ತಿದ್ದಾರೆ. ಈ ಜಾತ್ರೆಯಲ್ಲಿ ನವಜೋಡಿಗಳ ಕಲರವವೇ ಎಲ್ಲರ ಕೇಂದ್ರ ಬಿಂದುವಾಗಿದ್ದು, ಇದರಿಂದ ಚಾಮರಾಜನಗರದಲ್ಲಿ ಜಾತ್ರೆ ಕಳೆ ಹೆಚ್ಚಿದಂತಾಗಲಿದೆ.