Mysore
21
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಕೇಂದ್ರ, ರಾಜ್ಯ ಸರ್ಕಾರಗಳು ಕಾಡಂಚಿನ ಗ್ರಾಮದ ಜನರ ಒಕ್ಕಲೆಬ್ಬಿಸುವ ಹುನ್ನಾರ ನಡೆಸುತ್ತಿದೆ: ಬಡಗಲಪುರ ನಾಗೇಂದ್ರ ಆರೋಪ

ಹನೂರು: ಬಂಡವಾಳ ಶಾಹಿಗಳ ಪರವಾಗಿ ಕಾನೂನು ತಿದ್ದುಪಡಿ ಮಾಡಿ ಅರಣ್ಯ ಪ್ರದೇಶದಲ್ಲಿ ಖನಿಜ ಸಂಪತ್ತು ತೆಗೆಯಲು ಅವಕಾಶ ಕಲ್ಪಿಸಿರುವ ಕೇಂದ್ರ, ರಾಜ್ಯ ಸರ್ಕಾರ ಕಾಡಂಚಿನ ಗ್ರಾಮದ ಜನತೆಯನ್ನು ಒಕ್ಕಲೆಬ್ಬಿಸುವ ಹುನ್ನಾರ ಮಾಡುತ್ತಿದೆ, ಇದನ್ನು ವಿರೋಧಿಸಿ ರಾಜ್ಯಾದ್ಯಂತ ರೈತ ಸಂಘದ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.

ಹನೂರು ತಾಲೂಕಿನ ಗಡಿ ಗ್ರಾಮವಾದ ಗೋಪಿನಾಥಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಲಂಬಾಡಿ, ಪುದುಕಾಡು ಅಪ್ಪು ಕಾಂ ಪಟ್ಟಿ, ಆತೂರು ಗ್ರಾಮಗಳಲ್ಲಿ ನೂತನ ಗ್ರಾಮ ಘಟಕದ ನಾಮಫಲಕ ಉದ್ಘಾಟನೆ ಮಾಡಿ ನಂತರ ಅವರು ಮಾತನಾಡಿದರು .

ಬಂಡವಾಳ ಶಾಹಿಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಕಾನೂನು ತಿದ್ದುಪಡಿ ಮಾಡಿ ಅರಣ್ಯ ಪ್ರದೇಶದ ಮಧ್ಯಭಾಗದಲ್ಲಿ ಒಂದು ಲಕ್ಷ ಎಕರೆ ಭೂಮಿಯನ್ನು ಖನಿಜ ಸಂಪತ್ತು ತೆಗೆಯಲು ಪ್ರತ್ಯೇಕ ಕಾಯಿದೆ, ಕಾನೂನು ತಂದು ಅವಕಾಶ ಕಲ್ಪಿಸಿದೆ. ಜೊತೆಗೆ ಸಂಡೂರು ಗ್ರಾಮದ ಜಿಂದಾಲ್ ಕಂಪನಿಗೆ ರೂ.3676 ಎಕರೆ ಜಮೀನು ಸಹ ಕಾಯ್ದೆ ಬದಲಾವಣೆ ಮಾಡಿ ಸರ್ಕಾರ ಬಂಡವಾಳ ಶಾಹಿಗಳಿಗೆ ಅವಕಾಶ ಕಲ್ಪಿಸಿದೆ.

ಆದರೆ ಕಾಡಂಚಿನ ಗ್ರಾಮಗಳ ನಿವಾಸಿಗಳು ನೂರಾರು ವರ್ಷಗಳಿಂದ ವಾಸ ಮಾಡುವ ಬಡ ರೈತ ಕುಟುಂಬಗಳಿಗೆ ಅರಣ್ಯದಂಚಿನ ಗ್ರಾಮಗಳ ಜನರನ್ನು ಒಕ್ಕಲೇಬ್ಬಿಸಲು ಈಗಾಗಲೇ ಎರಡು ನೋಟಿಸ್ ಜಾರಿಗೊಳಿಸಿದ್ದಾರೆ. ಮುಗ್ಧ ರೈತ ಕುಟುಂಬದವರಿಗೆ ಅರಣ್ಯ ಇಲಾಖೆ ಅಧಿಕಾರಿಗಳ ದಬ್ಬಾಳಿಕೆಯಿಂದ ಏನು ಮಾಡಲು ಸಾಧ್ಯವಿಲ್ಲ, ರಾಜ್ಯ ರೈತ ಸಂಘ ಹನೂರು ತಾಲೂಕಿನ ವಿವಿಧ ಗ್ರಾಮಗಳ ರೈತರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರಲು ಈಗಾಗಲೇ ರೂಪುರೇಷೆಗಳನ್ನು ಸಿದ್ದ ಮಾಡಿಕೊಂಡಿದೆ. ಸ್ಥಳೀಯ ಶಾಸಕರು ಈ ಭಾಗದ ರೈತರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿ ಗಡಿ ಗ್ರಾಮದಲ್ಲಿರುವ ಜನತೆಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದರು.

ಚಾಮರಾಜನಗರ ಜಿಲ್ಲಾಧ್ಯಕ್ಷ ಶಿವಪುರ ಮಹದೇವಪ್ಪ ಮಾತನಾಡಿ ಸ್ವಾತಂತ್ರ್ಯ ಪೂರ್ವಕಾಲದಿಂದಲೂ ಇಲ್ಲಿನ ಜನತೆ ಕಾಡಂಚಿನ ಗ್ರಾಮಗಳಲ್ಲಿ ವಾಸಿಸುತ್ತಿದ್ದಾರೆ. ಅರಣ್ಯ ಇಲಾಖೆ ವಲಯಗಳನ್ನು ರೂಪಿಸಿಕೊಂಡು ಬಡ ಜನತೆಯನ್ನು ಒಕ್ಕಲೆಬ್ಬಿಸಲು ಕಾನೂನು ರೂಪಿಸುತ್ತಿದೆ. ಬಂಡವಾಳ ಶಾಹಿಗಳಿಗೆ ಕಾನೂನನ್ನು ಬದಲಾವಣೆ ಮಾಡಿ ಅರಣ್ಯ ಪ್ರದೇಶದಲ್ಲಿ ಖನಿಜ ಸಂಪತ್ತನ್ನು ಲೂಟಿ ಮಾಡಲು ಅವಕಾಶ ಕಲ್ಪಿಸುತ್ತಿದೆ. ಆದರೆ ಬಡ ರೈತರಿಗೆ ತೊಂದರೆ ನೀಡುತ್ತಿದ್ದಾರೆ. ಇನ್ನು ಮುಂದೆ ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಳ್ಳದಿದ್ದರೆ ಜಿಲ್ಲೆಯ್ಯಾದ್ಯಾಂತ ಹೋರಾಟ ಕನ್ನಡ ಸುವ ಮೂಲಕ ನಮ್ಮ ಹಕ್ಕನ್ನು ಪಡೆದುಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.

 

ಜಿಲ್ಲಾ ಉಪಾಧ್ಯಕ್ಷ ಗೌಡೇ ಗೌಡ ಮಾತನಾಡಿ ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹೆಚ್ಚಿನ ಗ್ರಾಮಗಳು ಅರಣ್ಯದಂಚಿನಲ್ಲೇ ಇರುವುದರಿಂದ ರೈತರು ಇಲ್ಲಿನ ಜನಸಾಮಾನ್ಯರು ಕಾಡುಪ್ರಾಣಿಗಳ ಹಾವಳಿಯಿಂದ ಈಗಾಗಲೇ ತತ್ತರಿಸಿದ್ದಾರೆ. ಜೊತೆಗೆ ಅರಣ್ಯ ಇಲಾಖೆ ಸಹ ಅಧಿಕಾರಿಗಳು ಸಿಬ್ಬಂದಿ ವರ್ಗದವರು ಜನಸಾಮಾನ್ಯರ ಮೇಲೆ ಮಾಡುತ್ತಿರುವ ದಬ್ಬಾಳಿಕೆ ಬಗ್ಗೆ ಹಲವು ಹೋರಾಟಗಳನ್ನು ನಡೆಸಿದ್ದೇವೆ. ಇದೀಗ ಅರಣ್ಯ ಜಮೀನು ಬಿಟ್ಟು ಕೊಡುವಂತೆ ನೋಟಿಸ್ ನೀಡಿದ್ದಾರೆ, ಇದನ್ನು ಕರ್ನಾಟಕ ರಾಜ್ಯ ರೈತ ಸಂಘ ವಿರೋಧಿಸುತ್ತದೆ. ನೀವು ಸಹ ರೈತರ ಮಕ್ಕಳಾಗಿದ್ದರೆ ನಮ್ಮ ರೈತರಿಗೆ ಯಾವುದೇ ತೊಂದರೆ ಕೊಡಬೇಡಿ ಎಂದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಕಾರ್ಯಧ್ಯಕ್ಷ ಶೈಲೇಂದ್ರ ಹನೂರು ತಾಲೂಕು ಘಟಕ, ಅಧ್ಯಕ್ಷ ಅಮ್ಜದ್ ಖಾನ್ ಗುಂಡ್ಲುಪೇಟೆ ಯುವ ಘಟಕದ ಅಧ್ಯಕ್ಷ ಭರತ್ ಹನೂರು ತಾಲೂಕು ಗೌರವಾಧ್ಯಕ್ಷ ರಾಜಣ್ಣ, ರೈತ ಮುಖಂಡರಾದ ಪಳನಿ ಸ್ವಾಮಿ, ವಸಂತ, ವೇಲು ಸ್ವಾಮಿ, ಸೂರ್ಯ, ರತ್ನವೇಲು, ವೆಂಕಟೇಶ್, ತಂಗವೇಲು ಸೇರಿದಂತೆ ಇನ್ನಿತರ ರೈತ ಮುಖಂಡರು ಉಪಸ್ಥಿತರಿದ್ದರು.

Tags: