ಕೊಳ್ಳೇಗಾಲ: ಕೊಳ್ಳೇಗಾಲ ತಾಲ್ಲೂಕಿನ ಭರಚುಕ್ಕಿ ಜಲಪಾತದ ತುದಿಗೆ ತೆರಳಿದ್ದ ಯುವಕರಿಗೆ ಪೊಲೀಸರು ಬಸ್ಕಿ ಶಿಕ್ಷೆ ನೀಡಿದ್ದಾರೆ.
ಮೋಜು ಮಸ್ತಿಗಾಗಿ ಜಲಪಾತದ ತುದಿಗೆ ತೆರಳಿದ್ದ ಇಪ್ಪತ್ತಕ್ಕೂ ಹೆಚ್ಚು ಯುವಕರು ಅಲ್ಲಿ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದರು.
ಖಚಿತ ಮಾಹಿತಿ ದೊರೆತ ಕೂಡಲೇ ಸ್ಥಳಕ್ಕೆ ಧಾವಿಸಿದ ಕೊಳ್ಳೇಗಾಲ ಠಾಣೆ ಪೊಲೀಸರು, ಯುವಕರನ್ನು ಜಲಪಾತದಿಂದ ಹಿಂದಕ್ಕೆ ಕರೆಸಿ ಬಸ್ಕಿ ಹೊಡೆಸಿದ್ದಾರೆ. ಬಳಿಕ ಫೋಟೋ ಹುಚ್ಚಿಗಾಗಿ ಪ್ರಾಣಕ್ಕೆ ಅಪಾಯ ತಂದುಕೊಳ್ಳಬೇಡಿ ಎಂದು ಬುದ್ಧಿ ಹೇಳಿ ಕಳುಹಿಸಿದ್ದಾರೆ.
ಕೆಆರ್‌ಎಸ್ ಜಲಾಶಯದಿಂದ ಅಪಾರ ಪ್ರಮಾಣದ ನೀರನ್ನು ಕಾವೇರಿ ನದಿಗೆ ಬಿಟ್ಟಿರುವುದರಿಂದ ಭರಚುಕ್ಕಿ ಜಲಪಾತ ಭೋರ್ಗರೆಯುತ್ತಾ ಧುಮ್ಮಿಕ್ಕುತ್ತಿದೆ. ಈ ಹಿನ್ನೆಲೆಯಲ್ಲಿ ಜಲಪಾತದ ಬಳಿ ತೆರಳದಂತೆ ಸೂಚನಾ ಫಲಕ ಹಾಕಲಾಗಿದ್ದರೂ, ಯುವಕರು ಸೆಲ್ಫಿ ಹುಚ್ಚಿಗಾಗಿ ಹತ್ತಿರಕ್ಕೆ ತೆರಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಯುವಕರಿಗೆ ಬಸ್ಕಿ ಹೊಡೆಸಿ ಕಳುಹಿಸಿದ್ದಾರೆ.
ಈ ಘಟನೆಗಳು ಮರುಕಳಿಸದಂತೆ ಜಲಪಾತದ ಬಳಿ ಪೊಲೀಸರನ್ನು ಕೂಡ ನಿಯೋಜನೆ ಮಾಡಲಾಗಿದ್ದು, ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ. ನೀರಿನ ಆರ್ಭಟ ಕಡಿಮೆಯಾಗುವವರೆಗೂ ಕೂಡ ಜಲಪಾತದ ಹತ್ತಿರ ತೆರಳದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.





