ಕೊಳ್ಳೇಗಾಲ : ನೆನ್ನೆ ತಾಲ್ಲೂಕಿನ ಶಿವನಸಮುದ್ರ – ದರ್ಗಾದ ಕಾವೇರಿ ನದಿಯಲ್ಲಿ ಕೊಚ್ಚಿಹೋಗಿದ್ದ ದಯಾನಂದ ಸಾಗರ್ ಕಾಲೇಜು ವೈದ್ಯಕೀಯ ವಿದ್ಯಾರ್ಥಿ ನಂದನ್ ಗೌಡ(19) ಶವವನ್ನು ಅಗ್ನಿಶಾಮಕ ದಳದವರು ಹಾಗೂ ನುರಿತ ಈಜುಪಟುಗಳು ನದಿಯಿಂದ ಹೊರತೆಗೆದಿದ್ದಾರೆ.
ಈ ಸಂಬಂಧ ಮೃತ್ತನ ತಂದೆ ರಾಮನಗರ ಜಿಲ್ಲೆಯ ಹಾರೋಹಳ್ಳಿ ಪಟ್ಟಣದ ವಾಸಿ ಹಾಗೂ ಬೆಂಗಳೂರು ಹಾಲು ಒಕ್ಕೂಟದ ಮ್ಯಾನೇಜಿಂಗ್ ಡೈರೆಕ್ಟರ್ ಶಿವಶಂಕರ್ ದೂರು ಸಲ್ಲಿಸಿ ನನ್ನ ಮಗ ಈಜಲು ಹೋಗಿ ಸತ್ತಿಲ್ಲ, ಬಲಾತ್ಕಾರವಾಗಿ ಇವನನ್ನು ಕರೆದುಕೊಂಡು ಹೋಗಿ ರ್ಯಾಗಿಂಗ್ ಮಾಡಿ ಸಾಯಿಸಿದ್ದಾರೆ. ಈ ಕಾರಣಕ್ಕಾಗಿ ನನ್ನ ಮಗನನ್ನು ಬಲಾತ್ಕಾರವಾಗಿ ಕರೆದುಕೊಂಡು ಬಂದು ಬಟ್ಟೆ ಬಿಚ್ಚಿಸಿ ರ್ಯಾಗಿಂಗ್ ಮಾಡಿ ಸಾವಿಗೆ ಕಾರಣ ಆರು ಮಂದಿ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಲಿಖಿತ ದೂರು ನೀಡಿದ್ದಾರೆ.
ದೂರು ದಾಖಲಿಸಿಕೊಂಡ ಗ್ರಾಮಾಂತರ ಪೊಲೀಸ್ ಠಾಣೆಯವರು ಈಬಗ್ಗೆ ತನಿಖೆ ನಡೆಸುತ್ತಿದ್ದು ದೂರಿನಲ್ಲಿ ತಿಳಿಸಿರುವಂತೆ ಆರೋಪ ಸಾಬೀತಾದರೆ ಆರೋಪಿಗಳನ್ನು ಬಂಧಿಸುವ ಸಾಧ್ಯತೆ ಇದೆ.
ಚಾ.ನಗರ ಜಿಲ್ಲಾಸ್ಪತ್ರೆಯಲ್ಲಿ ಶವದ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಿದ್ದಾರೆ.
ಆರೋಪಿಗಳಾದ ಶಿವಮೊಗ್ಗ ಜಿಲ್ಲೆಯ ಶಾಂತಿನಗರ ತನ್ಮಯ್, ಬೆಂಗಳೂರು ಅಮೃತಹಳ್ಳಿ ತುಷಾರ್, ಶಿವಮೊಗ್ಗ ಪವನ್, ಬೆಂಗಳೂರು ವಿಜಯನಗರ ಪ್ರಫುಲ್, ಬೆಂಗಳೂರು ರಜತ್ , ಕೊಡಗು ಸೋಮವಾರಪೇಟೆಯ ಚತುರ್ ಇವರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ತನಿಖೆಯಲ್ಲಿ ಇವರ ಮೇಲೆ ಆರೋಪ ಮೇಲ್ನೋಟಕ್ಕೆ ಸಾಬೀತಾದರೆ ಇವರು ಬಂಧಿಸುವ ಸಾಧ್ಯತೆ ಇದೆ.





