ಹನೂರು : ಕೃಷಿ ಹೊಂಡದಲ್ಲಿ ಮಹಿಳೆ ಹಾಗೂ ಯುವಕನ ಶವ ಪತ್ತೆಯಾಗಿರುವ ಘಟನೆ ಹನೂರು ಪೊಲೀಸ್ ಠಾಣಾ ವ್ಯಾಪ್ತಿಯ ಒಡೆಯರಪಾಳ್ಯ ಸಮೀಪದ ಗುಳ್ಯದಬಯಲು ಗ್ರಾಮದಲ್ಲಿ ನಡೆದಿದೆ.
ಹನೂರು ತಾಲ್ಲೂಕಿನ ಗುಳ್ಯದಬಯಲು ಗ್ರಾಮದ ಮೀನಾಕ್ಷಮ್ಮ (೩೨) ಹಾಗೂ ರವಿ (೩೦) ಮೃತಪಟ್ಟವರು.
ಘಟನೆಯ ವಿವರ
ಮೀನಾಕ್ಷಮ್ಮ ವಿವಾಹಿತೆಯಾಗಿದ್ದು, ಎರಡು ಮಕ್ಕಳು ಕೂಡ ಇದ್ದಾರೆ. ರವಿ ಅವಿವಾಹಿತನಾಗಿದ್ದು, ತಂದೆ ಸಾವಿನ ಬಳಿಕ ಕೃಷಿ ಚಟುವಟಿಕೆಯನ್ನು ನೋಡಿಕೊಳ್ಳುತ್ತಿದ್ದರು. ೧೦ ವರ್ಷಗಳಿಂದ ಮೀನಾಕ್ಷಮ್ಮ ರವಿ ಜಮೀನಿನಲ್ಲಿ ಕೂಲಿ ಕೆಲಸಕ್ಕೆ ತೆರಳುತ್ತಿದ್ದರು.
ಶನಿವಾರ ಸಂಜೆ ೫ರ ತನಕವೂ ಕೂಡ ಜಮೀನಿನಲ್ಲಿ ಬೆಳ್ಳುಳ್ಳಿ ಕಟಾವು ಮಾಡಿ ಬಳಿಕ ಮನೆಗೆ ತೆರಳಿದ್ದ ಮೀನಾಕ್ಷಿ ಮನೆಯಲ್ಲಿ ನೀರಿಲ್ಲ, ರವಿ ತೋಟದಲ್ಲಿ ಮೋಟಾರ್ ಚಾಲು ಮಾಡಿ ಬರುತ್ತೇನೆಂದು ಹೋದವರು ಕೃಷಿ ಹೊಂಡದಲ್ಲಿ ಪತ್ತೆಯಾಗಿದ್ದಾರೆ.
ಇನ್‌ಸ್ಪೆಕ್ಟರ್ ಭೇಟಿ
ಹನೂರು ತಾಲ್ಲೂಕಿನ ಒಡೆಯರ ಪಾಳ್ಯ ಸಮೀಪದ ಗುಳ್ಯದಬಯಲು ಗ್ರಾಮದ ತೋಟದ ಜಮೀನೋಂದರ ಕೃಷಿ ಹೊಂಡದಲ್ಲಿ ಇಬ್ಬರ ಶವಗಳು ತೇಲಾಡುತ್ತಿರುವ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಹನೂರು ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಆನಂದಮೂರ್ತಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿ ಇದೇ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಸಾವಿಗೆ ಕಾರಣವಾಯಿತೇ ವಿವಾಹೇತರ ಸಂಬಂಧ?:
ಕೂಲಿ ಮಾಡಿ ಬದುಕುತ್ತಿದ್ದ ಮೀನಾಕ್ಷಿ, ರವಿಯ ಜಮೀನಿನಲ್ಲೇ ಕೆಲಸ ಮಾಡುತ್ತಿದ್ದರು. ವಿವಾಹಿತೆ ಮೀನಾಕ್ಷಿ ಹಾಗೂ ಅವಿವಾಹಿತ ರವಿ ಜೊತೆ ವಿವಾಹೇತರ ಸಂಬಂಧ ಏರ್ಪಟ್ಟಿತ್ತು. ಈ ವಿವಾಹೇತರ ಸಂಬಂಧದಲ್ಲಿ ಭಿನ್ನಾಭಿಪ್ರಾಯ ಮೂಡಿ ಇಬ್ಬರೂ ಆತ್ಮಹತ್ಯೆ ಹಾದಿ ಹಿಡಿದಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಕೃಷಿ ಹೊಂಡದ ಬದಿಯಲ್ಲಿ ಇಬ್ಬರ ಫೋನ್ ಮತ್ತು ಚಪ್ಪಲಿಗಳಿದ್ದವು. ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಕಾರಣ ಏನೆಂದು ಗೊತ್ತಿಲ್ಲ, ಸಾವಿನ ಬಗ್ಗೆ ಅನುಮಾನವಿಲ್ಲ, ಅವರೇ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ರವಿಯ ಚಿಕ್ಕಪ್ಪ ನಂದೀಶ್ ಮಾಹಿತಿ ನೀಡಿದ್ದಾರೆ.
ಇನ್ನೂ ಈ ಬಗ್ಗೆ ಪ್ರತಿಕ್ರಿಯಿಸಿರುವ ಎಸ್‌ಪಿ ಡಾ.ಬಿ.ಟಿ.ಕವಿತಾ ಅವರು, ಹನೂರು ಪೊಲೀಸ್ ಠಾಣಾ ವ್ಯಾಪ್ತಿಯ ಗುಳ್ಯದ ಬಯಲು ಎಂಬ ಊರಿನಲ್ಲಿರುವ ಕೃಷಿ ಹೊಂಡದಲ್ಲಿ ಒಂದು ಶವ ಇದೆ ಎಂಬ ಮಾಹಿತಿ ಬಂದ ಮೇರೆಗೆ ಹನೂರು ಠಾಣಾ ಪೊಲೀಸರು ಭೇಟಿ ನೀಡಿ, ಪರಿಶೀಲಿಸಿದಾಗ ಅಲ್ಲಿ ಎರಡು ಮೃತದೇಹಗಳು ಪತ್ತೆಯಾಗಿವೆ. ಮೇಲ್ನೋಟಕ್ಕೆ ಇದು ಆತ್ಮಹತ್ಯೆಯ ಪ್ರಕರಣ ಎಂದು ಕಂಡುಬಂದಿದೆ. ಮೀನಾಕ್ಷಮ್ಮ ಅವರ ತಾಯಿ ಮುನಿಯಮ್ಮ ಈ ಕುರಿತಂತೆ ದೂರನ್ನು ಸಲ್ಲಿಸಿದ್ದಾರೆ. ಆ ದೂರಿನಲ್ಲಿ ಈ ಸಾವಿನ ಬಗ್ಗೆ ಅನುಮಾನ ಇದೆ ಎಂದು ಹೇಳಿದ್ದಾರೆ. ಹಾಗಾಗಿ, ನಾವು ಅನುಮಾನಾಸ್ಪದ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಮಾಡುತ್ತಿದ್ದೇವೆ. ಮೇಲ್ನೋಟಕ್ಕೆ ರವಿ ಹಾಗೂ ಮೀನಾಕ್ಷಮ್ಮ ಅವರ ನಡುವೆ ಸಂಬಂಧ ಇತ್ತು. ಅವರ ನಡುವಿನ ಭಿನ್ನಾಭಿಪ್ರಾಯದಿಂದಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬುದು ಕಂಡುಬರುತ್ತಿದೆ. ಈಗಾಗಲೇ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.





