ಚಾಮರಾಜನಗರ: ಗುಂಡ್ಲುಪೇಟೆಯ ನಾಲ್ಕು ಪುರಸಭಾ ಸದಸ್ಯರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಹಿನ್ನೆಲೆಯಲ್ಲಿ ಅವರ ಮನೆಯ ಮುಂದೆ ಪ್ರತಿಭಟಿಸುವಾಗ ಬಿಜೆಪಿಯ ಮಾಜಿ ಶಾಸಕರಾದ ನಿರಂಜನ್ ಕುಮಾರ್ ರವರು ಕಾಂಗ್ರೆಸ್ ರವರಿಗೆ ಸಂವಿಧಾನದ ಬಗ್ಗೆ ಗೌರವವಿಲ್ಲ ಎನ್ನುವ ಹೇಳಿಕೆ ನೀಡಿದ್ದು ಇದಕ್ಕೆ ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಡಾ.ಅಸ್ಕರ್ ಅಲಿ ರವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕಳೆದ ಹತ್ತು ವರ್ಷಗಳಲ್ಲಿ ಬಿಜೆಪಿ ಪಕ್ಷವು ದೇಶಾದ್ಯಂತ ಕಾಂಗ್ರೆಸ್ ನ 207 ಶಾಸಕರನ್ನು ಒಳಗೊಂಡಂತೆ, ವಿವಿಧ ಪಕ್ಷಗಳ 335 ಎಂಎಲ್ಎಗಳನ್ನು ಖರೀದಿಸಿ ಕರ್ನಾಟಕ, ಮಹಾರಾಷ್ಟ್ರ, ಮಧ್ಯ ಪ್ರದೇಶ, ಬಿಹಾರ ಸೇರಿದಂತೆ ಸುಮಾರು ಹತ್ತಕ್ಕೂ ಹೆಚ್ಚು ರಾಜ್ಯದ ಚುನಾಯಿತ ಸರ್ಕಾರಗಳನ್ನು ಕೆಡವಿದೆ. ಹಾಗಾಗಿ ಪಕ್ಷಾಂತದ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಗಿಲ್ಲ. 17 ಶಾಸಕರನ್ನು ಪಕ್ಷಾಂತರ ಮಾಡಿಸಿ ಬಿಜೆಪಿ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದಿತ್ತು ಹಾಗೂ ಅದೇ ಸರ್ಕಾರದಲ್ಲಿ ತಾವು ನಿಗಮವೊoದರ ಅಧ್ಯಕ್ಷರಾಗಿ ಅಧಿಕಾರ ಅನುಭವಿಸುವಾಗ ನಿಮಗೆ ಯಾಕೆ ಸಂವಿಧಾನದ ನೆನಪಾಗಲಿಲ್ಲ. ಅನಂತ್ ಕುಮಾರ್ ಹೆಗಡೆ ರವರು ಪದೇಪದೇ ಸಂವಿಧಾನದ ಬದಲಾವಣೆಯ ಬಗ್ಗೆ ಮಾತನಾಡುತ್ತಿದ್ದಾಗ ಸುಮ್ಮನಿದ್ದ ನೀವು ಈಗ ಏಕಾಏಕಿ ಸಂವಿಧಾನದ ಬಗ್ಗೆ ಕಾಂಗ್ರೆಸ್ಸಿಗರಿಗೆ ಪಾಠ ಮಾಡುತ್ತಿರುವುದು ಯಾಕೆ ಎಂದು ಪ್ರಶ್ನಿಸಿದರು.
ಪ್ರತಿಭಟನೆಯ ವೇಳೆ, ಎಲ್ಲಾ ಪಕ್ಷಗಳಿಗೂ ತಲಾ ಎರಡೆರಡು ಬಾರಿ ರೌಂಡ್ ಹೊಡೆದವರನ್ನು ಎಡಬಲದಲ್ಲಿ ಕೂರಿಸಿಕೊಂಡು ಪಕ್ಷಾಂತರದ ಬಗ್ಗೆ ಮಾಜಿ ಶಾಸಕರು ಮಾತನಾಡುತ್ತಿರುವುದು ಹಾಸ್ಯಸ್ಪದ ಎಂದು ವ್ಯಂಗ್ಯ ವಾಡಿದರು.





