ಕೊಳ್ಳೇಗಾಲ : ೧೨ನೇ ಶತಮಾನದಲ್ಲಿ ಬಸವಣ್ಣನವರು ಸವಾಜದ ಪರಿವರ್ತನೆಯ ಕ್ರಾಂತಿ ಉಂಟುಮಾಡಿದ್ದು, ೨೧ ನೇ ಶತಮಾನದಲ್ಲೂ ಅವರ ಸಂದೇಶಗಳು ಪ್ರಚಲಿತವಾಗಿವೆ ಎಂದು ಉಪವಿಭಾಗಾಧಿಕಾರಿ ಶಿವಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಜೆಎಸ್‌ಎಸ್ ಕಾಲೇಜಿನ ಸಭಾಂಗಣದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಜೆಎಸ್‌ಎಸ್ ಮಹಿಳಾ ಪ್ರಥಮ ದರ್ಜೆ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ‘ವಿಶ್ವಗುರು ಬಸವಣ್ಣ ಕರ್ನಾಟಕದ ಸಾಂಸ್ಕೃತಿಕ ನಾಯಕ’ ಸಮಾರಂಭ ಏರ್ಪಡಿಸಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿದ ಮಾತನಾಡಿದ ಅವರು, ೧೨ನೇ ಶತಮಾನದಲ್ಲಿ ಬಸವಣ್ಣನವರು ಸಮಾಜದ ಪರಿವರ್ತನೆಯ ಕ್ರಾಂತಿ ಉಂಟುಮಾಡಿದ್ದು, ೨೧ ನೇ ಶತಮಾನದಲ್ಲೂ ಅವರ ಸಂದೇಶಗಳು ಪ್ರಚಲಿತವಾಗಿವೆ ಎಂದರು.
ಅದರಲ್ಲೂ ಮಹಿಳೆಯರ ಸಬಲೀಕರಣಕ್ಕೆ ಹೆಚ್ಚು ಒತ್ತು ಕೊಟ್ಟಿದ್ದ ಬಸವಣ್ಣರವರ ಆಶೋತ್ತರದಂತೆ ಇಂದು ನಮ್ಮ ಕರ್ನಾಟಕ ರಾಜ್ಯ ಇವರನ್ನು ಸಾಂಸ್ಕೃತಿಕ ನಾಯಕ ಎಂದು ಒಪ್ಪಿಕೊಂಡು ಇವರ ಆಶಯದಂತೆ ಮಹಿಳೆಯರಿಗೆ ಶೇ.೩೩ ಮೀಸಲಾತಿಯನ್ನು ಸರ್ಕಾರ ನೀಡಿದೆ. ಈ ಮೂಲಕ ಆಡಳಿತ ಹಾಗೂ ರಾಜಕೀಯದಲ್ಲಿ ಮಹಿಳೆಯರು ಮುಂದೆ ಬರಲು ಸಾಧ್ಯವಾಗಿದೆ ಎಂದರು.
ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದು ತೇರ್ಗಡೆ ಹೊಂದಿ ಉನ್ನತ ಅಧಿಕಾರಿಗದಳಾಗುವ ಗುರಿಯನ್ನು ಹೊಂದಿರಬೇಕು ಎಂದು ತಿಳಿಸಿದರು.
ಜೆಎಸ್‌ಎಸ್ ಕಾಲೇಜು ಪ್ರಾಂಶುಪಾಲರಾದ ಮಹದೇವಸ್ವಾಮಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ತಾಲ್ಲೂಕು ಕಸಾಪ ಅಧ್ಯಕ್ಷ ಎಸ್.ನಾಗರಾಜು ಕೊಂಗರಹಳ್ಳಿ, ಕಾರ್ಯದರ್ಶಿ ಸಿ.ನಾಗರಾಜು, ಬಂಡಳ್ಳಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲರಾದ ಎಂ.ಮುತ್ತುರಾಜ್, ಜೆಎಸ್‌ಎಸ್ ಮುಖ್ಯಸ್ಥರಾದ ಮಮತ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.