ಚಾಮರಾಜನಗರ: ಪತ್ನಿಯನ್ನು ಹತ್ಯೆಗೈದು ತಲೆಮರೆಸಿಕೊಂಡಿದ್ದ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಜೂನ್.3ರಂದು ಚಾಮರಾಜನಗರ ಪೊಲೀಸ್ ಠಾಣೆಯಿಂದ ಕೂಗಳತೆ ದೂರದಲ್ಲಿಯೇ ಈ ಘಟನೆ ನಡೆದಿತ್ತು. ಸದ್ಯ ಆರೋಪಿ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಗಿರೀಶ್ ಎಂಬಾತನೇ ಬಂಧಿತ ಆರೋಪಿಯಾಗಿದ್ದಾನೆ.
ಪತ್ನಿ ವಿದ್ಯಾಳ ಅನೈತಿಕ ಸಂಬಂಧಕ್ಕೆ ಬೇಸತ್ತು ಪತಿ ಗಿರೀಶ್ ಆಕೆಯನ್ನು ಕುಡುಗೋಲಿನಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದ. ಪತ್ನಿ ವಿದ್ಯಾ ಅನ್ಯ ಜಾತಿಯ ಯುವಕನೊಂದಿಗೆ ಓಡಿಹೋಗಿದ್ದಳು. ಬಳಿಕ ಗಿರೀಶ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದ. ಇದಾದ ಬಳಿಕ ಗಿರೀಶ್ ಹಾಗೂ ವಿದ್ಯಾಳನ್ನು ಠಾಣೆಗೆ ಕರೆಸಿ ಪೊಲೀಸರು ಬುದ್ಧಿವಾದ ಹೇಳಿ ಕಳುಹಿಸಿದ್ದರು.
ಆದರೆ ಠಾಣೆಯಿಂದ ಹೊರಬಂದ ಕೂಡಲೇ ಗಿರೀಶ್ ಕುಡುಗೋಲಿನಿಂದ ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದು ಎಸ್ಕೇಪ್ ಆಗಿದ್ದ. ಮೂರು ದಿನಗಳಿಂದ ತಲೆಮರೆಸಿಕೊಂಡಿದ್ದ ಗಿರೀಶ್‌ನನ್ನು ಪೊಲೀಸರು ಬಂಧಿಸಿದ್ದಾರೆ.





