ಹನೂರು : ಪಟ್ಟಣದ ಕೇಂದ್ರ ಸ್ಥಾನದಲ್ಲಿ ೨೦ ಕೋಟಿ ರೂ. ವೆಚ್ಚದಲ್ಲಿ ೫೦ ಹಾಸಿಗೆಗಳ ಆಸ್ಪತ್ರೆ ನಿರ್ಮಾಣ ಮಾಡಲು ಸರ್ಕಾರ ಅನುಮೋದನೆ ನೀಡಿದ್ದು, ಮುಂದಿನ ಮೂರು ತಿಂಗಳಲ್ಲಿ ಕಾಮಗಾರಿ ಪ್ರಾರಂಭವಾಗಿ ಹನೂರು ಕ್ಷೇತ್ರದ ಜನರಿಗೆ ಉತ್ತಮ ಆರೋಗ್ಯ ಸೇವೆ ದೊರೆಯಲಿದೆ ಎಂದು ಮಾಜಿ ಶಾಸಕ ಆರ್.ನರೇಂದ್ರ ತಿಳಿಸಿದರು.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮ.ಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆಗೂ ಮುನ್ನಾ ಹನೂರು ತಾಲ್ಲೂಕು ಕೇಂದ್ರದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವಿದ್ದು ಇದನ್ನು ಮೇಲ್ದರ್ಜೆಗೇರಿಸಿ ನೂರು ಹಾಸಿಗೆಗಳ ಆಸ್ಪತ್ರೆ ನಿರ್ಮಾಣ ಮಾಡಿಕೊಡುವಂತೆ ಮನವಿ ಮಾಡಲಾಗಿತ್ತು. ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಹಾಗೂ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ರವರು ೨೦ ಕೋಟಿ ರೂ. ವೆಚ್ಚದಲ್ಲಿ ೫೦ ಹಾಸಿಗೆಗಳ ಆಸ್ಪತ್ರೆ ನಿರ್ಮಾಣ ಮಾಡಲು ಅನುದಾನ ಬಿಡುಗಡೆ ಮಾಡಿದ್ದಾರೆ. ಆದರೆ ಹನೂರು ತಾಲ್ಲೂಕು ಕೇಂದ್ರದಲ್ಲಿ ೧೦೦ ಹಾಸಿಗೆಗಳ ಆಸ್ಪತ್ರೆ ನಿರ್ಮಾಣ ಮಾಡಿದರೆ ನೂರಾರು ಕಿಲೋಮೀಟರ್ ವ್ಯಾಪ್ತಿಗಳಿಂದ ಬರುವ ರೋಗಿಗಳು ಚಿಕಿತ್ಸೆ ಪಡೆದುಕೊಳ್ಳಲು ಅನುಕೂಲವಾಗುತ್ತದೆ ಎಂದು ಮತ್ತೊಮ್ಮೆ ಮನವಿ ಮಾಡಲಾಗಿತ್ತು. ಈ ವೇಳೆ ೨೦ ಕೋಟಿ ವೆಚ್ಚದಲ್ಲಿ ಕಾಮಗಾರಿ ಪ್ರಾರಂಭವಾಗಲಿ. ಮುಂದಿನ ದಿನಗಳಲ್ಲಿ ೨೦ ಕೋಟಿ ರೂ. ಅನುದಾನ ನೀಡಿ ೧೦೦ ಹಾಸಿಗೆ ಆಸ್ಪತ್ರೆ ನಿರ್ಮಾಣ ಮಾಡೋಣ ಎಂದು ಭರವಸೆ ನೀಡಿದ್ದಾರೆ ಎಂದರು.
ಕ್ಷೇತ್ರ ವ್ಯಾಪ್ತಿಯಲ್ಲಿ ಅಪಘಾತ ಹಾಗೂ ಹೃದಯಘಾತ ಸಂಭವಿಸಿದಾಗ ಆಕ್ಸಿಜನ್, ಆಂಬ್ಯುಲೆನ್ಸ್ ಗಳ ಸೇವೆ ಇಲ್ಲದೆ ಇರುವುದು ಗಮನಕ್ಕೆ ಬಂದಿದೆ. ಈ ವಿಚಾರವನ್ನು ಆರೋಗ್ಯ ಸಚಿವರ ಜೊತೆ ಚರ್ಚೆ ನಡೆಸಿ ತಾಲ್ಲೂಕಿಗೆ ಆಕ್ಸಿಜನ್ ಆಂಬ್ಯುಲೆನ್ಸ್ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.





