Mysore
19
few clouds

Social Media

ಶನಿವಾರ, 14 ಫೆಬ್ರವರಿ 2026
Light
Dark

ಸಕಾಲಕ್ಕೆ ಸಿಗದ ಆಂಬುಲೆನ್ಸ್‌ ; ಡೋಲಿಯಲ್ಲಿ ವೃದ್ಧೆಯನ್ನು ಆಸ್ಪತ್ರೆಗೆ ಕರೆದೊಯ್ದ ಗ್ರಾಮಸ್ಥರು

ಹನೂರು : ಮೂರ್ಛೆ ತಪ್ಪಿದ್ದ ವೃದ್ದೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಆಂಬುಲೆನ್ಸ್ ಸಿಗದೆ ಡೋಲಿ ಮುಖಾಂತರ ಕರೆದುಕೊಂಡು ಬಂದಿರುವ ಘಟನೆ ರಾಜ್ಯದ ಪ್ರಸಿದ್ಧ ಧಾರ್ಮಿಕ ಯಾತ್ರಾಸ್ಥಳ ಮಲೆ ಮಹದೇಶ್ವರ ಬೆಟ್ಟದಲ್ಲಿ ಜರುಗಿದೆ.

ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಡುಹೊಲ ಗ್ರಾಮದ ದುಂಡಮ್ಮ(55) ಎಂಬುವರು ಮನೆಯಲ್ಲಿದ್ದ ಸಂದರ್ಭದಲ್ಲಿ ಮೂರ್ಛೆ ತಪ್ಪಿ ಬಿದ್ದಿದ್ದಾರೆ. ತಕ್ಷಣ ಸಂಬಂಧಿಕರು ಆಂಬುಲೆನ್ಸ್ ಗೆ ಕರೆ ಮಾಡಿದ್ದಾರೆ ಆದರೆ ಸರಿಯಾದ ಸಮಯಕ್ಕೆ ಆಂಬುಲೆನ್ಸ್ ಸಿಗದ ಕಾರಣ ಡೋಲಿ ಮುಖಾಂತರ ಮಲೆಮಹದೇಶ್ವರ ಬೆಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದು ಚಿಕಿತ್ಸೆ ಕೊಡಿಸಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗೆ ಕರೆದುಕೊಂಡು ಹೋಗಲು ಆಂಬುಲೆನ್ಸ್ ಸಿಗದೆ ಕೆಲಕಾಲ ಪರದಾಡಿದ್ದಾರೆ. ಖಾಸಗಿ ಆಂಬುಲೆನ್ಸ್ ಮೂಲಕ ತಮಿಳುನಾಡಿನ ಮೇಟೂರು ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲು ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಸ್ವಾತಂತ್ರ್ಯ ಬಂದು 79 ವರ್ಷಗಳು ಕಳೆದರು ಮಲೆ ಮಾದೇಶ್ವರ ಬೆಟ್ಟ ಸುತ್ತಮುತ್ತಲಿನ ಗ್ರಾಮಗಳಿಗೆ ರಸ್ತೆ ಸಾರಿಗೆ ವ್ಯವಸ್ಥೆ, ಇಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ತುರ್ತು ಸಂದರ್ಭಗಳಲ್ಲಿ ಆಂಬುಲೆನ್ಸ್ ಸಿಗದೆ ಡೋಲಿ ಮುಖಾಂತರ ಕರೆ ತರುತ್ತಿದ್ದಾರೆ. ಕಾಡಂಚಿನ ಗ್ರಾಮಗಳ ಜನರ ಅನುಕೂಲಕ್ಕಾಗಿ ಪ್ರಾಧಿಕಾರದ ವತಿಯಿಂದ ಒಂದು ಅಂಬುಲೆನ್ಸ್ ಹಾಗೂ ಸರ್ಕಾರದಿಂದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಒಂದು ಅಂಬುಲೆನ್ಸ್ ನೀಡಲಾಗಿತ್ತು. ಆದರೂ ತುರ್ತು ಸಂದರ್ಭಗಳಲ್ಲಿ ಆಂಬುಲೆನ್ಸ್ ಸಿಗದೇ ಇರುವುದರಿಂದ ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ.

ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಡಂಚಿನ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ, ವಿದ್ಯುತ್ ಸಂಪರ್ಕ ಸೇರಿದಂತೆ ಮೂಲಭೂತ ಸೌಲಭ್ಯ ಒದಗಿಸಲು ಕಳೆದ ವರ್ಷ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುದಾನ ದೊರೆತಿದೆ. ಆದರೆ ಅರಣ್ಯ ಇಲಾಖೆ ಅಧಿಕಾರಿಗಳ ಕಾಮಗಾರಿಗಳಿಗೆ ತಡೆ ನೀಡಿರುವುದರಿಂದ ಅಭಿವೃದ್ಧಿ ನೆನೆಗುದಿಗೆ ಬಿದ್ದಿದೆ. ಮುಂದಿನ ದಿನಗಳಲ್ಲಾದರೂ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಕಾಡಂಚಿನ ಗ್ರಾಮಗಳ ಜನರಿಗೆ ಅನುಕೂಲ ಕಲ್ಪಿಸುವಂತೆ ಪ್ರಜ್ಞಾವಂತ ನಾಗರಿಕರು ಮನವಿ ಮಾಡಿದ್ದಾರೆ.

ಸ್ವಾತಂತ್ರ್ಯ ಬಂದು ಇಷ್ಟು ವರ್ಷ ಕಳೆದರೂ ಮಲೆ ಮಾದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ಮೂಲಭೂತ ಸೌಲಭ್ಯ ಒದಗಿಸದೆ ಇರುವುದು ನಿಜಕ್ಕೂ ಖಂಡನಿಯ, ಜನಪ್ರತಿನಿಧಿಗಳು ನೀಡಿರುವ ಭರವಸೆ ಬರವಸೆಯಾಗಿಯೇ ಉಳಿದಿದೆ ಮುಂದಿನ ದಿನಗಳಲ್ಲಾದರೂ ಸೂಕ್ತ ರಸ್ತೆ ಮಾಡಿ ಅನುಕೂಲ ಕಲ್ಪಿಸುವಂತೆ ಸಾಮಾಜಿಕ ಕಾರ್ಯಕರ್ತ ಸ್ನೇಹಜೀವಿ ರಾಜು ಆಗ್ರಹಿಸಿದ್ದಾರೆ.

Tags:
error: Content is protected !!