ಹನೂರು: ತಾಲ್ಲೂಕಿನ ಮಲೆಮಹದೇಶ್ವರ ವನ್ಯಜೀವಿ ವಿಭಾಗದ ಪಚ್ಚೆದೊಡ್ಡಿ ಅರಣ್ಯ ಪ್ರದೇಶದಲ್ಲಿ ವಿಷ ಪ್ರಶಾನದಿಂದ ಹುಲಿ ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಗಂಗನದೊಡ್ಡಿ ಗ್ರಾಮದ ಗೋವಿಂದ ಎಂಬಾತನನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬುಧವಾರ ಸಂಜೆ ಮೈಸೂರು ರೈಲ್ವೆ ನಿಲ್ದಾಣದಲ್ಲಿ ಬಂಧಿಸಿದ್ದಾರೆ.
ಆಗಸ್ಟ್.2ರಂದು ಪಚ್ಚೆದೊಡ್ಡಿ ಅರಣ್ಯ ಪ್ರದೇಶದಲ್ಲಿ ವಿಷಪ್ರಾಷನದಿಂದ ಹುಲಿಯೊಂದನ್ನು ಸಾಯಿಸಿ ಅದನ್ನು 3 ತುಂಡುಗಳಾಗಿ ಬೇರ್ಪಡಿಸಲಾಗಿತ್ತು. ಈ ಸಂಬಂಧ ಅರಣ್ಯಾಧಿಕಾರಿಗಳು 7 ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಪಚ್ಚಮಲ್ಲು, ಸಿದ್ದು, ಸಂಪು, ಗಣೇಶ್, ಚಂದು ಹಾಗೂ ಅಭಿಷೇಕ್ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಿದ್ದರು. ಇತ್ತೀಚೆಗಷ್ಟೇ ನಾಲ್ವರು ಆರೋಪಿಗಳಿಗೆ ಕೊಳ್ಳೇಗಾಲ ಜೆಎಂಎಫ್‌ಸಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು. ನಾಪತ್ತೆಯಾಗಿದ್ದ ಆರೋಪಿ ಮರಿ ವೀರಪ್ಪನ್ ಎಂದೇ ಕುಖ್ಯಾತನಾಗಿದ್ದ ಗಂಗನದೊಡ್ಡಿ ಗ್ರಾಮದ ಗೋವಿಂದ ಪತ್ತೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ಕೈಗೊಂಡಿತ್ತು. ಆದರೆ ಆತ 5 ತಿಂಗಳಿಂದ ತಲೆಮರೆಸಿಕೊಂಡಿದ್ದನು.
ಮೈಸೂರು ರೈಲ್ವೆ ನಿಲ್ದಾಣದಲ್ಲಿ ಸೆರೆ: ಬುಧವಾರಮೈಸೂರು ನ್ಯಾಯಾಲಯಕ್ಕೆ ಕೇಸ್‌ವೊಂದರ ನಿಮಿತ್ತ ಆಗಮಿಸಿದ್ದ ಗೋವಿಂದನ ಬಗ್ಗೆ ಮಾಹಿತಿ ತಿಳಿದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದರು. ಆದರೆ ಈ ಬಗ್ಗೆ ತಿಳಿದ ಗೋವಿಂದ ತಪ್ಪಿಸಿಕೊಂಡು ರೈಲ್ವೆ ನಿಲ್ದಾಣಕ್ಕೆ ಹೊರಟಿದ್ದ ಆರೋಪಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹಲವು ಪ್ರಕರಣಗಳಲ್ಲಿ ಭಾಗಿ: ಹುಲಿಯನ್ನು ಮೂರು ಪೀಸ್ ಮಾಡಿದ್ದ ಕೊಂದಿದ್ದ ಪ್ರಮುಖ ಆರೋಪಿ ಗೋವಿಂದನ ವಿರುದ್ಧ ರಾಮಾಪುರ ಠಾಣೆ ಹಾಗೂ ರಾಮಾಪುರ ವನ್ಯಜೀವಿ ವಲಯ ಮತ್ತು ಹನೂರು ಬಫರ್ ವಲಯ, ಹನೂರು ಠಾಣೆ, ಅರಣ್ಯ ಸಂಚಾರಿ ದಳದಲ್ಲಿ ಪ್ರಕರಣಗಳು ದಾಖಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಎಸಿಎಫ್ ವಿರಾಜ್ ಹೊಸೂರ್, ಆರ್‌ಎಫ್‌ಒಗಳಾದ ನಾಗರಾಜು, ಜೀತೇಂದ್ರ, ಮೈಸೂರು ಅಪರಾದ ಪತ್ತೆದಳದ ಅಧಿಕಾರಿಗಳು ಪಾಲ್ಗೊಂಡಿದ್ದರು.




