ಚಾಮರಾಜನಗರ : ತಾಲೂಕಿನ ಕಮರವಾಡಿ ಸಮೀಪ ಗುರುವಾರ ರಾತ್ರಿ ಸಂಭವಿಸಿದ ಎರಡು ಬೈಕ್ಗಳ ನಡುವೆ ಅಪಘಾತದಲ್ಲಿ ಅಗ್ನಿ ವೀರ ಯೋಧ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಚಾಮರಾಜನಗರದ ಪ್ರಜ್ವಲ್ (21) ಸಾವನ್ನಪ್ಪಿದ ಅಗ್ನಿವೀರ. ಚಾಮರಾಜನಗರದ ಸೇವಾ ಭಾರತಿ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ರಾಮಚಂದ್ರ ಅವರ ಪುತ್ರನಾಗಿರುವ ಇವರು ಪಶ್ಚಿಮ ಬಂಗಾಳದಲ್ಲಿ ಅಗ್ನಿವೀರ ಆಗಿ ಕೆಲಸ ಮಾಡುತ್ತಿದ್ದರು. ರಜೆ ಮೇಲೆ ಬಂದಿದ್ದ ಪ್ರಜ್ವಲ್, ಮೈಸೂರಿಗೆ ತೆರಳಿ ಟೀ.ನರಸೀಪುರ ಮಾರ್ಗವಾಗಿ ವಾಪಸ್ ಮರಳುವಾಗ ಕಮರವಾಡಿ ಬಳಿ ಬೈಕ್‌ಗಳ ನಡುವೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಎದುರಿನ ಬೈಕ್ನಲ್ಲಿದ್ದ ಸುಭಾಷ್, ಮಹಾದೇವಸ್ವಾಮಿ ಹಾಗೂ ಪ್ರಜ್ವಲ್ ಬೈಕ್ನಲ್ಲಿದ್ದ ರೋಹಿತ್ ಎಂಬವರಿಗೆ ಗಾಯಗಳಾಗಿದೆ. ಅವರನ್ನು ಸಂತೇಮರಹಳ್ಳಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಪ್ರಜ್ವಲ್ ಸ್ಥಳದಲ್ಲೇ ಮೃತಪಟ್ಟಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸಿಮ್ಸ್ಗೆ ರವಾನೆ ಮಾಡಿ, ಬೈಕ್ಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.





