ಸರಗೂರು: ಕೆಎಸ್‌ಆರ್‌ಟಿಸಿ ಬಸ್‌ವೊಂದು ಸ್ಟೇರಿಂಗ್ ತುಂಡಾಗಿ ದೊಡ್ಡ ಕೆರೆಗೆ ಉರುಳಿಬಿದ್ದು, ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ 25 ಮಂದಿಯಲ್ಲಿ 21 ಮಂದಿ ಗಾಯಗೊಂಡಿದ್ದಾರೆ. ಅದರಲ್ಲಿ ಆರು ಮಂದಿ ಸ್ಥಿತಿ ಗಂಭೀರವಾಗಿದೆ.
ಪಟ್ಟಣದಿಂದ ಯಡಿಯಾಲ ಮಾರ್ಗವಾಗಿ ಕಾಡು ಬೇಗೂರಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ವೊಂದು ಸ್ಟೇರಿಂಗ್ ತುಂಡಾಗಿ ಸಮೀಪದ ಬೊಂತೇಗಾಲದ ಕೆರೆಗೆ ಉರುಳಿ ಬಿದ್ದಿರುವ ಘಟನೆ ನಡೆದಿದೆ.
ಸರಗೂರಿನಿಂದ ಕಾಡುಬೇಗೂರು-ಕುರ್ಣೆಗಾಲಕ್ಕೆ ಗುರುವಾರ ರಾತ್ರಿ ತೆರಳುತ್ತಿದ್ದ ಬಸ್(ಕೆಎ11ಎ- 0333)ನಲ್ಲಿ 25 ಮಂದಿ ತೆರಳುತ್ತಿದ್ದರು. ಇದರಲ್ಲಿ ನಾಲ್ಕು ಮಂದಿಗೆ ಗಂಭೀರ ಗಾಯವಾಗಿದೆ. ಚಾಲಕ ರವೀಶ್, ಕಂಡಕ್ಟರ್ ಗಣೇಶ್ ಸೇರಿದಂತೆ ಉಳಿದವರಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ಸರಗೂರಿನ ಸರ್ಕಾರಿ ಆಸ್ಪತ್ರೆ, ಎಚ್.ಡಿ.ಕೋಟೆ ಹಾಗೂ ಮೈಸೂರಿಗೆ ಸ್ಥಳಾಂತರಿಸಲಾಗಿದೆ.
ಸ್ಥಳೀಯರು ಹಾಗೂ ಪೊಲೀಸ್ ಸಿಬ್ಬಂದಿಗಳ ನೆರವಿನಿಂದ ಗಾಯಗಳನ್ನು ಬಸ್‌ನಿಂದ ಹೊರ ತೆಗೆದು ಆಸ್ಪತ್ರೆಗೆ ಕಳುಹಸಿಲಾಗಿದೆ. ಸ್ಥಳಕ್ಕೆ ಸರಗೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಶರತ್, ಬಿ.ಮಟಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಚಂದ್ರಶೇಖರ್ ಭೇಟಿ ನೀಡಿ ಗಾಯಾಳುಗಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಕಳುಹಿಸಲಾಗಿದೆ. ಸರಗೂರು ವೃತ್ತ ನಿರೀಕ್ಷಕ ಪ್ರಸನ್ನ ಕುಮಾರ್, ಎಸ್‌ಐ ಅಶೋಕ್‌ಕುಮಾರ್ ಭೇಟಿ ನೀಡಿ ಪರಿಶೀಲಿಸಿದರು.





