ಮಹಾದೇಶ್ ಎಂ ಗೌಡ, ಹನೂರು ತಾಲ್ಲೂಕು ವರದಿಗಾರರು
ಹನೂರು: ಶ್ರೀಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆಯ ಮೂಲಕ ತೆರಳುತ್ತಿದ್ದ ಬಾಲಕನ ಮೇಲೆ ಚಿರತೆ ದಾಳಿಯಿಂದ ಗಾಯಗೊಂಡ ಘಟನೆಯ ನಂತರ ಮಲೆ ಮಹದೇಶ್ವರ ಬೆಟ್ಟ ಮುಖ್ಯರಸ್ತೆ ಬದಿಯಲ್ಲಿ ಒಂಟಿ ಸಲಗ ನಿಂತು ದರ್ಶನ ನೀಡಿರುವುದು ವಾಹನ ಸವಾರರು ಹಾಗೂ ಪಾದಯಾತ್ರಿಕರಲ್ಲಿ ಮತ್ತಷ್ಟು ಭಯವನ್ನುಂಟು ಮಾಡಿದೆ.
ರಾಜ್ಯದ ಪ್ರಸಿದ್ಧ ಧಾರ್ಮಿಕ ಯಾತ್ರಾ ಸ್ಥಳ ಶ್ರೀ ಕ್ಷೇತ್ರ ಮಲೆ ಮಾದೇಶ್ವರ ಬೆಟ್ಟದಲ್ಲಿ ಐದು ದಿನಗಳ ಕಾಲ ನಡೆಯಲಿರುವ ಮಹಾಶಿವರಾತ್ರಿ ಜಾತ್ರಾ ಮಹೋತ್ಸವಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಲಕ್ಷಾಂತರ ಮಂದಿ ಭಕ್ತಾದಿಗಳು ಪಾದಯಾತ್ರೆಯ ಮೂಲಕ ಆಗಮಿಸುತ್ತಿದ್ದಾರೆ.
ಮಂಗಳವಾರ ಬೆಳಿಗ್ಗೆ ಚನ್ನಪಟ್ಟಣ ಮೂಲದ 20ಕ್ಕೂ ಹೆಚ್ಚು ಭಕ್ತಾದಿಗಳು ಮಲೆ ಮಹದೇಶ್ವರ ಸ್ವಾಮಿಯ ದರ್ಶನ ಪಡೆಯಲು ಹೊರಟಿದ್ದರು. ಚನ್ನಪಟ್ಟಣದಿಂದ ತಾಳು ಬೆಟ್ಟದವರೆಗೆ ಬಸ್ಸಿನಲ್ಲಿ ಆಗಮಿಸಿ ನಂತರ ತಾಳು ಬೆಟ್ಟದಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆಯ ಮೂಲಕ ತರಡುತ್ತಿದ್ದಾಗ ಪಲ್ಲವಿ ಎಂಬುವವರ ಪುತ್ರ ಶ್ರೇಯಸ್ಸ್ ಮೇಲೆ ಚಿರತೆ ದಾಳಿ ನಡೆಸಿದೆ. ಪರಿಣಾಮ ಶ್ರೇಯಸ್ ಗಾಯಗೊಂಡು ಮಲೆಮಾದೇಶ್ವರ ಬೆಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದುಕೊಂಡು ಚೇತರಿಸಿಕೊಂಡಿದ್ದಾರೆ. ಈ ಘಟನೆಯ ಬಗ್ಗೆ ವಾಟ್ಸಪ್ ಇನ್ಸ್ಟಾಗ್ರಾಮ್ ಗಳಲ್ಲಿ ಸುದ್ದಿ ಹರಿದಾಡುತ್ತಿದ್ದಂತೆ ಕೆಲವು ಭಕ್ತಾದಿಗಳು ಪಾದಯಾತ್ರೆ ಮೊಟಕುಗೊಳಿಸಿ ಬಸ್ ಮೂಲಕ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿದ್ದಾರೆ. ಇನ್ನು ಕೆಲವರು ಮಹದೇಶ್ವರನ ಮೇಲೆ ನಂಬಿಕೆ ಇಟ್ಟು ಪಾದಯಾತ್ರೆ ಮುಂದುವರಿಸಿದ್ದಾರೆ.
ಈ ನಡುವೆ ಮಂಗಳವಾರ ಮಧ್ಯಾಹ ಮೂರು ಗಂಟೆಯ ವೇಳೆಯಲ್ಲಿ ಮಲೆ ಮಾದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ಯಳಂದೂರು ಮೂಲದ ಭಕ್ತಾದಿಗಳಿಗೆ ಒಂಟಿ ಸಲಗ ರಸ್ತೆ ಬದಿಯಲ್ಲಿ ದರ್ಶನ ನೀಡಿದೆ. ಇದನ್ನು ಗಮನಿಸಿದ ಭಕ್ತಾದಿಗಳು ಸ್ವಲ್ಪ ಸಮಯ ವಿಚಲಿತರಾಗಿದ್ದಾರೆ. ನಂತರ ತಮ್ಮ ಮೊಬೈಲ್ ನಲ್ಲಿ ವಿಡಿಯೋ ಚಿತ್ರೀಕರಿಸಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಐದು ದಿನಗಳ ಕಾಲ ನಡೆಯುವ ಮಹಾಶಿವರಾತ್ರಿ ಜಾತ್ರಾ ಮಹೋತ್ಸವಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ಇದರ ನಡುವೆ ಪಾದಯಾತ್ರಿಕರಿಗೆ ಆನೆ, ಚಿರತೆ ಕಾಣಿಸಿಕೊಳ್ಳುತ್ತಿರುವುದರಿಂದ ಆತಂಕಕ್ಕೀಡಾಗಿದ್ದಾರೆ. ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ಕಾಡುಪ್ರಾಣಿಗಳು ರಸ್ತೆಗೆ ಬಾರದಂತೆ ಸೂಕ್ತ ಕ್ರಮ ವಹಿಸಿ ಪಾದಯಾತ್ರಿಕರಿಗೆ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ.




