ಗ್ರಾಮದಲ್ಲಿ ಹಬ್ಬದ ವಾತಾವರಣ; ಜಾತ್ರೆಗೆ ಸಕಲ ಸಿದ್ಧತೆ
ಮಹೇಂದ್ರ ಹಸಗೂಲಿ
ಗುಂಡ್ಲುಪೇಟೆ: ತಾಲ್ಲೂಕಿನಲ್ಲಿ ದೊಡ್ಡ ಜಾತ್ರೆ ಎಂದು ಪ್ರಸಿದ್ಧಿ ಪಡೆದಿರುವ ಹಸಗೂಲಿ ಜಾತ್ರೆ ನ.14 ರಿಂದ ನ.16 ರವರೆಗೆ ಮೂರು ದಿನಗಳ ಕಾಲ ಅದ್ಧೂರಿಯಾಗಿ ನಡೆಯಲಿದೆ.
ನ.14 ರ ಸೋಮವಾರ ಹಸಗೂಲಿ ಗ್ರಾಮದಿಂದ ಪಾರ್ವತಾಂಬೆ ವಿಗ್ರಹ ಹೊತ್ತು ಮೂಲ ಸ್ಥಳ ಕಸಗಲಪುರಕ್ಕೆ ಗ್ರಾಮಸ್ಥರು ಜನರು ತೆರಳಿ ರಾತ್ರಿಯಿಡೀ ಪೂಜೆ ಸಲ್ಲಿಸಿ, ನಂತರ ಮಂಗಳವಾರ ಗ್ರಾಮಕ್ಕೆ ದೇವಿಯ ವಿಗ್ರಹ ಹೊತ್ತು ತರುತ್ತಾರೆ.
ಮಂಗಳವಾರ ಹಸಗೂಲಿ ಗ್ರಾಮದಲ್ಲಿ ಸೇವಂತಿಗೆ ಹೂವಿನಿಂದ ರಥವನ್ನು ಸಿಂಗಾರಗೊಳಿಸಿ, ಮೂಲ ಸ್ಥಳದಿಂದ ದೇವಿಯ ವಿಗ್ರಹ ತರುತ್ತಾರೆ. ಈ ವೇಳೆ ಬರಗಿಯಿಂದ ದೇಶಿಪುರ, ಆಲತ್ತೂರು, ಶೆಟ್ಟಹಳ್ಳಿ ಗ್ರಾಮಸ್ಥರು ದೇವರಿಗೆ ಪೂಜೆ ಸಲ್ಲಿಸುವರು. ನಂತರ ಗ್ರಾಮದಲ್ಲಿ ತಂದು ರಥದಲ್ಲಿ ಕೂರಿಸಿ ಗ್ರಾಮದಲ್ಲಿ ಮಧ್ಯಾಹ್ನ 3ಗಂಟೆಯ ನಂತರ ಮೆರವಣಿಗೆ ಹೊರಡುವುದು.
ಸಾವಿರಾರು ಸಂಖ್ಯೆಯಲ್ಲಿ ಜನರು ಹಸಗೂಲಿ ಅಲ್ಲಹಳ್ಳಿ ಪಾರ್ವತಾಂಬೆಯನ್ನು ನೋಡಲು ಅಗಮಿಸುತ್ತಾರೆ. ಹರಕೆ ಹೊತ್ತವರು ಬಾಯಿಬೀಗ, ಹಣ್ಣು, ಕಜ್ಜಾಯ ಎಸೆದು, ಕಷ್ಟ ಪರಿಹರಿಸು ಎಂದು ದೇವಿಯನ್ನು ಬೇಡಿ ಕಣ್ತುಂಬಿಕೊಳ್ಳುವರು.
ಮಂಗಳವಾರ ಮಧ್ಯಾಹ್ನ ಮತ್ತು ರಾತ್ರಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ದೇವಿಯ ರಥ ಮೆರವಣಿಗೆ ಹೊರಡಲಿದೆ. ಬುಧವಾರ ಬೆಳಿಗ್ಗೆ ಗ್ರಾಮದಲ್ಲಿ ದೇವಿಯನ್ನು ಕುಳ್ಳಿರಿಸಿದ ರಥ ಸಂಚರಿಸಲಿದ್ದು, ಗ್ರಾಮಸ್ಥರು ಪೂಜೆ ಸಲ್ಲಿಸುತ್ತಾರೆ.
ಒಟ್ಟಿನಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಹಸಗೂಲಿ ಪಾರ್ವತಾಂಬೆ ಜಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುವಂತೆ ಜಾತ್ರಾ ಸಮಿತಿ ಹಾಗೂ ಗ್ರಾಮಸ್ಥರು ಮನವಿ ಮಾಡಿದ್ದಾರೆ.
ನೂತನ ಸ್ವರ್ಣ ಕಲ್ಲಿನ ದೇವಸ್ಥಾನ ನಿರ್ಮಾಣ
ಹಸಗೂಲಿ ಗ್ರಾಮದಲ್ಲಿ ಸುಮಾರು ಮೂರೂವರೆ ಕೋಟಿ ರೂ. ವೆಚ್ಚದಲ್ಲಿ ಬೃಹತ್ ಸ್ವರ್ಣ ಕಲ್ಲಿನ ದೇವಸ್ಥಾನ ನಿರ್ಮಾಣವಾಗುತ್ತಿದ್ದು, ಗ್ರಾಮದ ಹೃದಯ ಭಾಗದಲ್ಲಿ ನಿರ್ಮಾಣವಾಗುತ್ತಿದೆ. ದೇವಸ್ಥಾನದ ಅಭಿವೃದ್ಧಿಗೆ ದಾನಿಗಳು, ಜನರು ಕಾಣಿಕೆಯನ್ನು ನೀಡಿ ದೇಗುಲ ಪೂರ್ಣಗೊಳಿಸಬೇಕೆಂಬುದು ಸಾರ್ವಜನಿಕರ ಆಶಯವಾಗಿದೆ